ಕಲಾವಿದನ ಕುಂಚದಲ್ಲಿ ಅರಳಿದ ರೇಣುಕಾಚಾರ್ಯ ನವ ಲೀಲೆ

Renukacharya Nava Leela blossomed in the artist's brush
ಬೆಂಗಳೂರಿನ ಜಗದ್ಗುರು ಶ್ರೀ ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಕಲಾವಿದ ವಿನಾಯಕ ಚಿಕ್ಕೋಡಿ ಚಿತ್ರಿಸಿದ ರೇಣುಕಾಚಾರ್ಯರ ರೇಖಾ ಚಿತ್ರಗಳನ್ನು ಅನಾವರಣಗೊಳಿಸಲಾಯಿತು.
Published on

ಮಹಾಲಿಂಗಪುರ: ಪಟ್ಟಣದ ಚಿತ್ರಕಲಾವಿದ ವಿನಾಯಕ ಚಿಕ್ಕೋಡಿ ಚಿತ್ರಿಸಿದ ರೇಖಾ ಚಿತ್ರಪಟಗಳು ಬೆಂಗಳೂರಿನ ಜಗದ್ಗುರು ಶ್ರೀ ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ರೆಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅನಾವರಣಗೊಂಡು ಕಣ್ಮನ ಸೆಳೆದವು.

ಚಿಕ್ಕಮಗಳೂರಿನ ರಂಭಾಪುರಿ ಮಠದಲ್ಲಿ ಗೋಡೆ ಮೇಲೆ ರೇಣುಕಾಚಾರ್ಯರ ಲೀಲೆಗಳನ್ನು ಬಿಂಬಿಸುವ ಸುಂದರ ನೈಜ ಚಿತ್ರಗಳನ್ನು ಚಿತ್ರಿಸಬೇಕೆಂಬ ಯೋಜನೆ ಸಿದ್ಧವಾದಾಗ ಅದಕ್ಕೂ ಮುನ್ನ ಅವರ ಲೀಲೆಗಳ ರೇಖಾಚಿತ್ರ ಸಿದ್ಧಗೊಳಿಸಬೇಕೆಂದು ಜಗದ್ಗುರುಗಳು ಅಪೇಕ್ಷೆ ಪಡುತ್ತಾರೆ. ಆಗ ಸಿದ್ಧಗೊಂಡಿದ್ದೇ ಈ ರೇಣುಕಾಚಾರ್ಯರ ನವಲೀಲೆಗಳ ರೇಖಾಚಿತ್ರಗಳು.

ಮೂರು ತಿಂಗಳ ಅವಿರತ ಕಾರ್ಯನಿರತ:

ರೇಣುಕಾಚಾರ್ಯರ 9 ಲೀಲೆಗಳನ್ನು ಬಿಂಬಿಸುವ ನೈಜ ರೇಖಾ ಚಿತ್ರಗಳನ್ನು ರಚಿಸಲು ವಿನಾಯಕ ತನ್ನ ನಿತ್ಯದ ಕೆಲಸಗಳ ಒತ್ತಡದ ನಡುವೆಯೂ ನಿರಂತರ ಕಾರ್ಯೋನ್ಮುಖನಾಗಿ ಸತತ 3 ತಿಂಗಳು ಶ್ರಮಿಸಿದ್ದಾರೆ. ಒಂದಕ್ಕಿಂತ ಒಂದು ನೈಜ, ಸುಂದರವಾಗಿರುವ ರೇಖಾ ಚಿತ್ರಗಳನ್ನು ಬೆಂಗಳೂರಿಗೆ ಒಯ್ದು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಪೂಜ್ಯರಿಂದ ಅನಾವರಣಗೊಳಿಸಿದ್ದಾರೆ. ಯುವ ಕಲಾವಿದನ ಕೈಚಳಕ ಕಂಡು ಪೂಜ್ಯರು ಪುಳಕಿತಗೊಂಡು ಶ್ರೀಮಠದ ವತಿಯಿಂದ ಸನ್ಮಾನಿಸಿದ್ದಾರೆ.

ಬೆಂಗಳೂರಿನ ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯ ಎಸ್.ಬಿ.ಹಿರೇಮಠ ಮತ್ತು ರಬಕವಿಯ ಹಿರಿಯ ಚಿತ್ರಕಲಾವಿದ ಮಹಾದೇವ ಕವಿಶೆಟ್ಟಿ ಅವರು ನನಗೆ ಈ ರೇಖಾಚಿತ್ರ ರಚಿಸುವ ಸುವರ್ಣಾವಕಾಶ ಒದಗಿಸಿಕೊಟ್ಟರು. ನನ್ನ ಮಾವನವರಾದ ಮಹಾಲಿಂಗಪ್ಪ ಬೀಳಗಿ ಸಹಕಾರ ನೀಡಿದರು. ಅವಕಾಶವನ್ನು ಒಪ್ಪಿಕೊಂಡು ನನ್ನ ಕಲೆ ಪ್ರದರ್ಶಿಸಿದ್ದೇನೆ. ಜಗದ್ಗುರುಗಳ ಮೆಚ್ಚುಗೆ ನನಗೆ ಮತ್ತಷ್ಟು ಉತ್ಸಾಹ ತುಂಬಿದೆ. ವಿನಾಯಕ ಚಿಕ್ಕೋಡಿ, ಚಿತ್ರಕಾವಿದ ಮಹಾಲಿಂಗಪುರ ಮಹಾಲಿಂಗಪುರದ ಯುವ ಕಲಾವಿದ ವಿನಾಯಕ ಚಿಕ್ಕೋಡಿ ಅವರು ಚಿತ್ರಿಸಿ ಕೊಟ್ಟ ರೇಖಾಚಿತ್ರಗಳು ಅದ್ಭುತವಾಗಿವೆ. ಅವರ ಕಲಾಪ್ರತಿಭೆ ಅಗಾಧವಾದುದು. ಅವರು ಚಿತ್ರಿಸಿದ ರೇಖಾಚಿತ್ರಗಳನ್ನೇ ಆಧಾರವಾಗಿಟ್ಟುಕೊಂಡು ಬಾಳೆಹೊನ್ನೂರಿನ ರಂಭಾಪುರಿ ಮಠದ ಗೋಡೆ ಮೇಲೆ ರೇಣುಕಾಚಾರ್ಯರ ನವಲೀಲಾ ಚಿತ್ರಗಳು ರಚನೆಯಾಗಲಿವೆ. ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ, ಬಾಳೆಹೊನ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net