

ಮಂಡ್ಯ: ವೀರಶೈವ ಲಿಂಗಾಯತ ಮಠಗಳು ಸಮಾಜಕ್ಕೆ ಜಾತ್ಯಾತೀತವಾಗಿ ದೊಡ್ಡ ಕೊಡುಗೆ ನೀಡಿವೆ ಎಂದು ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಗಂಗಾ ಮಠ, ಸುತ್ತೂರು ಮಠ, ಬೇಬಿ ಮಠ ಸೇರಿದಂತೆ ರಾಜ್ಯದ ಮಠಗಳ ಶಾಲೆ, ಹಾಸ್ಟೆಲ್‌ಗಳಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿರುವುದು ಇದಕ್ಕೆ ಸಾಕ್ಷಿ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತೇನೆ ಎಂದರು.
ಮಠ ಅಂದಿನಿಂದ ಸೇವೆ ಮಾಡಿಕೊಂಡು ಬಂದಿವೆ. ಏಕೆಂದರೆ ಧರ್ಮ ಎಂದರೆ ಪ್ರೀತಿಸು ಎಂದರ್ಥ. ಸತ್ಯ, ನೀತಿ ಮತ್ತು ನ್ಯಾಯವನ್ನು ಧಾರಣೆ ಮಾಡಬೇಕೆಂದು ಅರ್ಥ. ಎಲ್ಲ ಧಾರ್ಮಿಕ ಮುಖಂಡರು ಸಮಾಜದ ಕಲ್ಯಾಣಕ್ಕಾಗಿ ಬಂದಿರುತ್ತಾರೆ. ಶಿವನ ಸ್ವರೂಪವಾಗಿ ಗುರುಗಳು ಈ ಜಗತ್ತಿನಲ್ಲಿ ಇದ್ದಾರೆ. ಅದರಂತೆ ಜಗದ್ಗುರು ರೇಣುಕಾಚಾರ್ಯರು ಬಂದಿದ್ದಾರೆ. ಗುರು ಏಕೆ ಬರುತ್ತಾರೆ ಎಂದರೆ ಜ್ಞಾನ ನೀಡಲು, ಅರಿವನ್ನು ನೀಡಲು, ಭಕ್ತರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗಲು, ಭಕ್ತರ ಕರ್ಮವನ್ನು ಹೋಗಲಾಡಿಸಲು ಬರುತ್ತಾರೆಯೇ ವಿನಃ ಸಿರಿ ಸಂಪತ್ತು ಗಳಿಸುವುದಕ್ಕಲ್ಲ. ಮಧ್ವಾಚಾರ್ಯರು, ಶಂಕರಾಚಾರ್ಯರು, ಬಸವಣ್ಣನವರು, ಬುದ್ಧ, ಜಗದ್ಗುರು ರೇಣುಕಾಚಾರ್ಯರಾಗಬಹುದು. ಎಲ್ಲರೂ ಬಂದ ಉದ್ದೇಶ ಒಂದೇ, ಸಮಾಜದ ಕಲ್ಯಾಣಕ್ಕಾಗಿ ಪ್ರತಿಯೊಬ್ಬರಲ್ಲೂ ಸಂಸ್ಕಾರ ಕೊಟ್ಟು ಬೆಳೆಸಲು ಬಂದಿರುವವರು ಎಂದರು.
ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮಮತಾ ಸಾಲಿಮಠ, ವೀರಶೈವ ಧರ್ಮ ಒಂದು ಜಾತಿ ಮತ್ತು ಮತಕ್ಕೆ ಮಾತ್ರ ಸೀಮಿತವಾಗದೆ ಮನುಕುಲದ ಉದ್ಧಾರಕ್ಕಾಗಿ ರೂಪುಗೊಂಡಿದೆ. ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ಬೋಧಿಸಿದ ಸಂದೇಶ ಸಾರವೇ ’ಸಿದ್ಧಾಂತ ಶಿಖಾಮಣಿ.’ ಸಿದ್ಧಾಂತ ಶಿಖಾಮಣಿಯನ್ನು ಅಧ್ಯಯನ ಮಾಡಿದರೆ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಸಂಸ್ಥಾಪಕರು ಎಂದು ಖಂಡಿತವಾಗಿ ಹೇಳಬಹುದು. ಯಾರು ಮತಧರ್ಮ ಗ್ರಂಥಗಳನ್ನು ಓದುವುದಿಲ್ಲವೋ, ತತ್ವಗಳನ್ನು ಪಾಲಿಸುವುದಿಲ್ಲವೋ, ಆಚಾರ ವಿಚಾರ ಇರುವುದಿಲ್ಲವೋ ಅಂತಹವರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಜನಿಸಿದ ಕೊಲ್ಲಿ ಪಾಟಿಯಲ್ಲಿ 18 ಮಠ ನಿರ್ಮಿಸಿರುವುದು ಕ್ರಾಂತಿಕಾರಕ ಕ್ರಮ. ಮಾನವತೆ ಧರ್ಮ ದೊಡ್ಡದು ಎಂದು ಬೋಧನೆ ಮಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥ ರಚಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಹೋಗೋಣ. ಧರ್ಮ ಜಾತಿ ಮತ ಮೀರಿ ಆಚರಣೆ ಮಾಡೋಣ ಎಂದು ಕರೆ ನೀಡಿದರು.
ಮಳವಳ್ಳಿ ತಾಲೂಕು ಧನಗೂರು ಸಿಂಹಾಸನ ಸಂಸ್ಥಾನ ಮಠದ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೆ.ಆರ್.ಪೇಟೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯಸ್ವಾಮಿ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು, ವೃತ್ತ ನಿರೀಕ್ಷಕ ನವೀನ್, ಸಮಿತಿಯ ಕೆ.ಎಸ್.ಷಡಕ್ಷರಿ, ಎಂ.ಎಸ್.ಶಿವಪ್ರಕಾಶ್, ಗೊರವಾಲೆ ಚಂದ್ರಶೇಖರ್ ಉಪಸ್ಥಿತರಿದ್ದರು.