

ನರೇಗಲ್ಲ: ಆದಿ ಜಗದ್ಗುರು ಶ್ರೀ ರೇಣುಕರು ವೀರಶೈವ ಧರ್ಮದ ಸಂಸ್ಥಾಪಕರು. ಎಲ್ಲರನ್ನೂ ಪ್ರೀತಿಸಿ, ಗೌರವಿಸುವ ಗುಣ ಹೊಂದಿರುವ ಈ ಧರ್ಮದ ಸ್ಥಾಪನೆ ಮೂಲಕ ಅವರು ಧರ್ಮಕ್ಕೆ ಭದ್ರ ಬುನಾದಿ ಹಾಕಿದರು. ಆದ್ದರಿಂದ ಶ್ರೀ ರೇಣುಕಾಚಾರ್ಯರು ಎಂದಿಗೂ ಜಗದ್ವಂದ್ಯರು ಎಂದು ಡಾ. ಕೆ.ಬಿ. ಧನ್ನೂರ ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಚರಿಸಲಾದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ನಿಮಿತ್ತ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀ ಬಾಳೆಹೊನ್ನೂರು ಪೀಠ ಸ್ಥಾಪಿಸುವ ಮೂಲಕ ಧರ್ಮ ಜಾಗೃತಿಗೆ ಮುಂದಾದರು ಎಂದರು.
ನಿವೃತ್ತ ಪ್ರಾಚಾರ್ಯ ಡಿ.ಎ. ಅರವಟಗಿಮಠ ಮಾತನಾಡಿ, ಶ್ರೀ ರೇಣುಕರು ತೋರಿದ ಲೀಲೆಗಳು ಅಪಾರ. ಅವುಗಳನ್ನು ಅರಿಯಬೇಕೆಂದರೆ ಚರಿತ್ರೆ ಓದಬೇಕು. ಅವರು ರಚಿಸಿರುವ ಸಿದ್ಧಾಂತ ಶಿಖಾಮಣಿಯಲ್ಲಿ ಜೀವನಕ್ಕೆ ಬೇಕಾದ ಅನೇಕ ಮೌಲ್ಯಗಳಿವೆ. ಅವುಗಳನ್ನು ಅರ್ಥೈಸಿಕೊಂಡು ಬದುಕಿದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು.
ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಶ್ರೀ ರೇಣುಕರು ತಮ್ಮ ಉಗಮಕ್ಕೆ ಅಂಗವನ್ನಾಧರಿಸಲಿಲ್ಲ. ಅವರು ಲಿಂಗದಿಂದ ಉದ್ಭವಿಸಿದರು. ಆದ್ದರಿಂದ ಅವರನ್ನು ಲಿಂಗೋದ್ಭಕ ಜಗದ್ಗುರು ಎಂದು ಕರೆಯಲಾಗುತ್ತದೆ. ಅವರು ದೇವ ಸೃಷ್ಟಿಯ ಪರಮಾತ್ಮ ಸ್ವರೂಪರು. ದೇಹ ಸೃಷ್ಟಿಯ ಮಾನವರಲ್ಲ ಎಂದರು.
ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ರುದ್ರಮುನಿ ಹಿರೇಮಠ, ಶರಣಪ್ಪ ಜುಟ್ಲದ, ಶಿವಯೋಗಿ ಜಕ್ಕಲಿ, ಈಶ್ವರ ಬೆಟಗೇರಿ, ಪ್ರಶಾಂತ ಹಿರೇಮಠ, ಬಸನಗೌಡ ಹಿರೆಗೌಡ್ರ, ವಿರುಪಾಕ್ಷಗೌಡ ಹಿರೆಗೌಡ್ರ, ಶಶಿಧರ ಓದ್ಸುಮಠ, ಅನ್ನಪೂರ್ಣೆಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿ ಧನ್ನೂರ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಇತರರಿದ್ದರು.