ಕೋಲಾರದಲ್ಲಿ ರೇಣುಕಾ ಯಲ್ಲಮ್ಮದೇವಿ ಹಸಿಕರಗ ಸಂಭ್ರಮ

karaga
Published on

ಕೋಲಾರ: ನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ ಶನಿವಾರ ರಾತ್ರಿ ವೈಭವದಿಂದ ನಡೆದಿದ್ದು, ಮೂವರು ಕರಗವನ್ನು ತಟ್ಟೆಯೊಂದರಲ್ಲಿಟ್ಟು ಕೈಯಲ್ಲೇ ಕುಣಿಸುವುದರ ವಿಶಿಷ್ಟತೆ ಎಲ್ಲರ ಮನಸೂರೆಗೊಂಡಿತಲ್ಲದೆ ಸಹಸ್ರಾರು ಮಂದಿ ವೀಕ್ಷಿಸಿದರು.

ರಾತ್ರಿ 9ರ ವೇಳೆಗೆ ನಗರದ ಟೇಕಲ್​ ರಸ್ತೆಯ ಗೋಪಾಲಗೌಡ ನಿವಾಸದ ಆವರಣದಲ್ಲಿ ಗಂಗಾಪೂಜೆ ಮುಗಿಸಿದ ನಂತರ ಹಸಿ ಕರಗವನ್ನು ಕರಗ ಪೂಜಾರಿ ಬಿ.ವಿ.ಮಂಜುನಾಥ್​, ಸಂತೋಷ್​, ಕಿರಣ್​ ಜತೆಗೂಡಿ ಕೈಯಲ್ಲೇ ಹೊತ್ತು ತರುತ್ತಿದ್ದಂತೆ ವೀರಕುಮಾರರ ಗೋವಿಂದಾ ಗೋವಿಂದಾ ಘೋಷಣೆ ಮುಗಿಲುಮುಟ್ಟಿತ್ತು.

ಹಸಿ ಕರಗವನ್ನು ಕರಗದ ಪೂಜಾರಿ ಮಂಜುನಾಥ್​ ಸೇರಿ ಮೂವರು ಕೈಗಳಲ್ಲಿ ಕುಣಿಸುತ್ತಾ ಬದಲಿಸುತ್ತಾ ಸಾಗುತ್ತಿದ್ದು, ನೋಡುಗರಲ್ಲಿ ಭಕ್ತಿಯ ಭಾವನೆ ಇಮ್ಮಡಿಗೊಳ್ಳಲು ಕಾರಣವಾಗಿತ್ತು.

ಹಸಿ ಕರಗಕ್ಕೆ ಮೊದಲು ಗೋಪಾಲಗೌಡರ ಕುಟುಂಬದಿಂದ ಪೂಜೆ ಸಲ್ಲಿಸಿದ ನಂತರ ನೇರವಾಗಿ ನಗರದ ಚೌಡೇಶ್ವರಿ ಬಡಾವಣೆಯ ಚೌಡೇಶ್ವರಿ ದೇವಾಲಯಕ್ಕೆ ಆಗಮಿಸಿ ಅಲ್ಲಿ ಕರಗ ಕೈಯಲ್ಲಿಡಿದ ಮೂವರ ನೃತ್ಯ ಮನಸೂರೆಗೊಂಡಿತು.

ನಂತರ ಪಿಸಿಹಳ್ಳಿ ಮಾರ್ಗವಾಗಿ ಜಯನಗರ 7ನೇ ಕ್ರಾಸ್​ನಲ್ಲಿನ ಸಫಲಮ್ಮ ದೇವಾಲಯಕ್ಕೆ ಆಗಮಿಸಿ ಅಲ್ಲಿಯೂ ಪೂಜೆ, ನೃತ್ಯ ಮುಗಿದ ನಂತರ ಹಾರೋಹಳ್ಳಿ ಬಡಾವಣೆಯಲ್ಲಿ ಹಸಿಕರಗ ಸಂಚರಿಸಿ ನಂತರ ನಗರದ ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿತು.

ಹೂವಿನ ಕರಗ ಮಹೋತ್ಸವ ಮೇ12ರ ರಾತ್ರಿ 8ಕ್ಕೆ ನಡೆಯಲಿದ್ದು, ಮೇ 13ರ ಮಧ್ಯಾಹ್ನ ಅಗ್ನಿಕುಂಡ ಪ್ರವೇಶ ನಡೆಯಲಿದೆ.

ದೀಪೋತ್ಸವ: ಭಾನುವಾರ ರೇಣುಕಾ ಯಲ್ಲಮ್ಮ ದೇವಿ ದೀಪೋತ್ಸವ ನಡೆಯಿತು. ಸುತ್ತಮುತ್ತಲಿನ ನಗರದ ಪ್ರದೇಶದವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರಿಗೆ ದೀಪಗಳನ್ನು ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net