

ಚನ್ನಗಿರಿ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ನವೋದಯ, ಮುರಾರ್ಜಿ, ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ನುರಿತ ಶಿಕ್ಷಕರಿಂದ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಮದರ್ ತೆರೇಸಾ ಆಂಗ್ಲ ಮಾಧ್ಯಮ ಸಂಸ್ಥೆಯ ಅಧ್ಯಕ್ಷೆ ಎಲ್. ರೇಣುಕಾ ರಾಜು ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ಗೇಟ್ನ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಶೇಷವಾದ ಬುದ್ಧಿವಂತಿಕೆ, ಜ್ಞಾನವಿದ್ದರೂ ಪೋ›ತ್ಸಾಹ ಸಿಗದೆ ಅವಕಾಶಗಳಿಂದ ವಂಚಿತರಾಗುತ್ತಾರೆ. ಅವರಲ್ಲಿರುವ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದರೆ ಸುಲಭವಾಗಿ ಸಾಧನೆಯನ್ನು ಮಾಡುತ್ತಾರೆ. ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ನುರಿತ ಶಿಕ್ಷಕರಿಂದ ತರಬೇತಿಗಳನ್ನು ನೀಡಲಾಗುತ್ತಿದೆ. ಇದರಿಂದ ಬಡ ಮತ್ತು ಗ್ರಾಮೀಣ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ಶಿಕ್ಷಣದಲ್ಲಿ ಪೈಪೋಟಿ ಅಧಿಕವಾಗಿದೆ, ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುವುದು ಕಷ್ಟ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂದು ಪಾಲಕರು, ದುಡಿದ ಆದಾಯದ ಶೇ.60 ರಷ್ಟನ್ನು ವಿದ್ಯಾಭ್ಯಾಸಕ್ಕೆ ಮೀಸಲಿಡುತ್ತಾರೆ. ಆದ್ದರಿಂದ ಮಕ್ಕಳು ತಂದೆ- ತಾಯಿಯ ಆಸೆಯನ್ನು ಈಡೇರಿಸುವ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಾಜು, ಮುಖ್ಯಶಿಕ್ಷಕಿ ದಾಕ್ಷಾಯಿಣಿ ಹಾಗೂ ಶಿಕ್ಷಕ ವೃಂದ ಇದ್ದರು.