ವೀರಶೈವ ಧರ್ಮವೃಕ್ಷಕ್ಕೆ ರೇಣುಕರೇ ತಾಯಿಬೇರು: ರಂಭಾಪುರಿ ಜಗದ್ಗುರುಗಳ ಅಭಿಮತ

Renuka
ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ತುಮಕೂರು ಸಂಸದ ಜಿ.ಎಸ್.ಬಸವರಾಜ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು.
Published on

ಬಾಳೆಹೊನ್ನೂರು: ಅಂತರಂಗ-ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟು ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದೆ. ವೀರಶೈವ ಧರ್ಮ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ತಾಯಿಬೇರು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ರಂಭಾಪುರಿ ಪೀಠದಲ್ಲಿ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವೀರಶೈವ ಧರ್ಮ ಜೀವ ಶಿವನಾಗುವ ಅಂಗ ಲಿಂಗವಾಗುವ ದೇಹ ದೇಗುಲವಾಗುವ ಭವಿ ಭಕ್ತನಾಗುವ ಸಂಸ್ಕಾರ ನೀಡಿದೆ. ಜಾತಿ ಜ್ಯೋತಿಯಾಗಿಸುವ ಕರ್ಮ ಧರ್ಮವನ್ನಾಗಿಸುವ ಕಾಯಕ ಕೈಲಾಸವಾಗಿಸುವ ನೆಲ-ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಪರಿವರ್ತಿಸುವ ವಿಶೇಷತೆ ಹೊಂದಿದೆ. ಅರ್ಚನೆಗಿಂತ ಅರ್ಪಣೆಗೆ, ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯ್ಕೆ, ದಾನಕ್ಕಿಂತ ದಾಸೋಹಕ್ಕೆ ವಿಶೇಷ ಒತ್ತು ಕೊಟ್ಟಿದೆ ಎಂದರು. ಜಾತಿ ಜಂಜಡಗಳನ್ನು ಕಳೆದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಮಾದಿಗನಾದ ಮಾತಂಗನಿಗೆ ಶಿವದೀಕ್ಷೆಯಿತ್ತು ಮಾತಂಗ ಋಷಿಯನ್ನಾಗಿ ಪರಿವರ್ತಿಸಿದ ಹಿರಿಮೆ ರೇಣುಕಾಚಾರ್ಯರದ್ದು. ಅವರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರ ದಶ ಸೂತ್ರಗಳು ಸಕಲರ ಬಾಳಿಗೆ ದಾರಿದೀಪ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ತುಮಕೂರು ಸಂಸದ ಜಿ.ಎಸ್.ಬಸವರಾಜ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ವಿಮಲ ರೇಣುಕ ವೀರಮುಕ್ತಿ ಶಿವಾಚಾರ್ಯ ಸ್ವಾಮೀಜಿ, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮುಂತಾದವರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಸ್ವೀಕರಿಸುವುದು ಅತ್ಯಂತ ಮಹತ್ವದ ಸಂಗತಿ. ಧರ್ಮ ಕಾರ್ಯನಿರ್ವಹಿಸುವಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ತುಮಕೂರಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ನಿರ್ಮಾಣ ಮಾಡಿ ಪೀಠಕ್ಕೆ ಸಮರ್ಪಿಸುವ ಸಂಕಲ್ಪ ನನ್ನದಾಗಿದೆ. ಒಂದು ವರ್ಷದೊಳಗೆ ಮಂದಿರ ನಿರ್ಮಾಣ ಪೂರ್ಣಗೊಳಿಸಲಾಗುವುದು. | ಜಿ.ಎಸ್.ಬಸವರಾಜು ತುಮಕೂರು ಸಂಸದ ರಂಭಾಪುರಿ ಜಗದ್ಗುರುಗಳು ಮಾನವ ಧರ್ಮಕ್ಕಾಗಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದಾಗ ದೇಶದ ವ್ಯವಸ್ಥೆ ಸುಲಲಿತವಾಗಿರುತ್ತದೆ. | ಶಂಕರ ಪಾಟೀಲ ಮುನೇನಕೊಪ್ಪ ಜವಳಿ ಮತ್ತು ಸಕ್ಕರೆ ಸಚಿವ

ಕಪ್ ವಿತರಣೆ ಕೃತಿ ಬಿಡುಗಡೆ: ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾಪೋಷಿತ ಹಳೇ ವಿದ್ಯಾರ್ಥಿ ಸಂಘದಿಂದ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಹೊನಲು ಬೆಳಕಿನ ಪ್ರೊ ಮಾದರಿ ಕಬಡ್ಡಿ ಪಂದ್ಯಾವಳಿ ವಿಜೇತರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಕಪ್ ವಿತರಿಸಲಾಯಿತು. ಟಿ.ಜಿ.ಸಿದ್ದಪ್ಪಾರಾಧ್ಯರು ರಚಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೃತಿಯ 12ನೇ ಮುದ್ರಣವನ್ನು ಶಾಸಕ ಟಿ.ಡಿ.ರಾಜೇಗೌಡ ಬಿಡುಗಡೆ ಮಾಡಿದರು.

ಶಿವಜ್ಞಾನ ಬೋಧಿಸಿದ ಪರಮಾಚಾರ್ಯ ಜಗತ್ತಿನ ಕಲ್ಯಾಣ, ಶಾಂತಿ-ಸಾಮರಸ್ಯ ನಿರ್ವಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊನಲುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದ ಪುಣ್ಯದಿನ. ಪರಶಿವನ ಸದ್ಯೋಜಾತ ಮುಖದಿಂದ ಪರಮಾಚಾರ್ಯರು ಅವತರಿಸಿದರು.ಮಹಾಮುನಿ ಅಗಸ್ಱರಿಗೆ ಶಿವಜ್ಞಾನ ಬೋಧಿಸಿ ಉದ್ಧರಿಸಿದವರು. ಶ್ರೀ ವೀರಭದ್ರಸ್ವಾಮಿ ದುಷ್ಟರ ನಿಗ್ರಹ ಶಿಷ್ಟರ ಪರಿಪಾಲನೆ ಮಾಡಿಕೊಂಡು ಬಂದಿದ್ದಾನೆ. ಭಕ್ತರ ಅಭ್ಯುದಯಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಹೊರ ರಾಜ್ಯಗಳಲ್ಲೂ ಸಂಚರಿಸಿ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಶ್ರಮ ಅನನ್ಯವಾದುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net