ಸಿಎಂ ಬದಲಾಗಲ್ಲ ಅನ್ನೋದು ಸೂರ್ಯ ಚಂದ್ರ ಇರೋಷ್ಟೇ ಸತ್ಯ; ನಂಗೆ ಶಾಸಕ ಸ್ಥಾನವೇ ಸಾಕು

renukacharya
Published on

ದಾವಣಗೆರೆ: ರಾಜ್ಯದ ಸಿಎಂ ಬದಲಾವಣೆ ವಿಚಾರದಲ್ಲಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ. ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದು ಎಂದು ಅವರು ಹೇಳಿದ್ದಾರೆ.

ಯಾರೋ ಸೋತಂತವರೆಲ್ಲ ಹೋಗಿ ಲಾಬಿ ಮಾಡಿದ್ರೆ ಸಿಎಂ ಬದಲಾಗಲ್ಲ. ಅವರನ್ನ ಮಂತ್ರಿ ಮಾಡಿದ್ದಕ್ಕೆ ಅವರು ಕೊಡುವ ಕೊಡುಗೆ ಇದೇನಾ? ಮಂತ್ರಿಯಾದವರು ಜನರ ಮಧ್ಯೆ ಕೆಲಸ ಮಾಡಬೇಕು. ಅದರ ಬದಲು ದೆಹಲಿಯಲ್ಲಿ ಕುಳಿತು ಲಾಬಿ ಮಾಡುವುದಲ್ಲ ಎಂದು ದೂರಿದ್ದಾರೆ.

ನನಗೆ ಮಂತ್ರಿಗಿರಿ ಬೇಕಾಗಿಲ್ಲ. ಅದನ್ನು ತಗೊಂಡು ನಾನೇನು ಮಾಡಲಿ? ಸಚಿವರಾಗಿ ಮಜಾ ಮಾಡುವವರು ಮಜಾ ಮಾಡಲಿ. ನನ್ನ ಕ್ಷೇತ್ರದಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ ಎಂದು ಹೆಸರು ಹೇಳದೇ ಸಂಪುಟ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ.

ಈ ನಡುವೆ ಶಾಸಕರು ಸ್ವಪಕ್ಷ ಸಚಿವ ಉಮೇಶ್ ಕತ್ತಿ ವಿರುದ್ಧವೇ ಕಿಡಿ ಕಾರಿದ್ದಾರೆ. ನಾನು ಯಾವುದೋ ವಿಚಾರಕ್ಕೆ ಕತ್ತಿ ಅವರಿಗೆ ಪೋನ್ ಮಾಡಿದ್ದೆ. ಆಗ ಬೇಕಿದ್ದರೆ ನನ್ನ ರಾಜೀನಾಮೆ ತಗೋ ಅಂತ ಉಡಾಪೆಯಾಗಿ ಮಾತಾಡ್ತಾರೆ. ಈ ರೀತಿಯಾಗಿ ಮಾತಾಡಿದ್ರೆ, ಪಕ್ಷಕ್ಕೆ, ಸಂಘಟನೆಗೆ ಮುಜುಗರ ಆಗುತ್ತೆ. ಕತ್ತಿಯವರೇ 8 ಭಾರಿ ಗೆದ್ದಿದ್ದೀರಿ ಉಡಾಫೆ ಮಾತು ನಿಲ್ಲಿಸಿ. 5 ಕೆಜಿ ಅಕ್ಕಿ ಕೊಡೋ ಕಾರ್ಯಕ್ರಮ ಮುಂದುವರೆಸಿ ಎಂದು ನಾವು ಸಿಎಂಗೆ ಹೇಳಿದ್ದೇವೆ. ಉಮೇಶ್ ಕತ್ತಿ ಅವರ ಕಾರ್ಯವೈಖರಿಂದ ಸರ್ಕಾರಕ್ಕೆ ಮುಜುಗರ ಆಗಿದೆ ಎಂದು ಅವರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net