ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

mng--29 sep lorry meeting
Published on

ಮಂಗಳೂರು: ಕಲ್ಲಿದ್ದಲು ಬಾಡಿಗೆ ದರ ಹೆಚ್ಚಿಸುವಂತೆ ಬಹುಕಾಲದ ಬೇಡಿಕೆಯನ್ನು ಮುಂದಿಟ್ಟು ಲಾರಿ ಯೂನಿಯನ್ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.


ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರುಕವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಲಾರಿ ಯೂನಿಯನ್ ಹಾಗೂ ಟ್ರಾನ್ಸ್‌ಪೋರ್ಟರ್ಸ್ ನಡುವೆ ನಡೆದ ಸಂಧಾನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ದರ ಏರಿಕೆ ಬಗ್ಗೆ ಬೇಡಿಕೆಗಳಿದ್ದರೂ ಲಾರಿ ಮಾಲೀಕರಿಗೆ ನ್ಯಾಯ ದೊರಕಿರಲಿಲ್ಲ. ಮುಷ್ಕರ ಘೋಷಿಸುವ ಸಂದರ್ಭ ತಲಾ 100 ರೂ. ಹೆಚ್ಚಿಸುವ ಭರವಸೆಯನ್ನು ಟ್ರಾನ್ಸ್‌ಪೋರ್ಟರ್ಸ್ ನೀಡಿದ್ದರು. ಶುಕ್ರವಾರ ನಡೆದ ಸಭೆಯಲ್ಲಿ ಡಿಸಿ ಅವರು ಸಂಧಾನ ಸಭೆ ನಡೆಸಿ 150 ರೂ. ಏರಿಕೆಗೆ ಸೂಚಿಸಿದ್ದಾರೆ. ಬಾಡಿಗೆ ದರವನ್ನು ಮುಂದಿನ 3 ದಿನಗಳಲ್ಲಿ ಏರಿಸುವ ಭರವಸೆ ಸಿಕ್ಕಿದೆ. ಹೀಗಾಗಿ ಮುಷ್ಕರ ಕೈಬಿಟ್ಟಿದ್ದೇವೆ ಎಂದರು.


ಕೊಪ್ಪಳ ಭಾಗಕ್ಕೆ ಪ್ರತಿ ಟನ್ ಗೆ ಕನಿಷ್ಠ ಸಾಗಾಟ ಬಾಡಿಗೆಯು 1050 ರೂ. ಹಾಗೂ ಬಳ್ಳಾರಿ ಕಡೆಗೆ 1100 ರೂ. ಆಗಿದ್ದು, ಈ ಬಾಡಿಗೆಗೆ ಇದೀಗ ತಲಾ 150 ರೂ. ಏರಿಸಲಾಗುತ್ತದೆ. ಇದರಿಂದ ಲಾರಿ ಮಾಲೀಕರಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.


ಪೊಲೀಸ್ ಆಯುಕ್ತರ ಅನುಪಮ್ ಅಗರ್‌ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಡಿಸಿಪಿ ಸಿದ್ದಾಥ್ ಗೋಯಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net