

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿಆರ್ಎಲ್ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಇಲ್ಲಿಯ ವಿಜಯನಗರದ ಲಯನ್ಸ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘವು ಸೆ. 28ರಂದು ಸಂಜೆ 5 ಗಂಟೆಗೆ ನಗರದ ನವೀನ ಹೋಟೆಲ್ನಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ತಂಡದವರಿಂದ ಸಪ್ನೋ ಕೀ ಉಡಾನ್-ಸಂಗೀತ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ಗಿರೀಶ ಮಾನೆ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ನೀಡಲು ಹಣ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರವೇಶ ಪಾಸ್ಗಳ ಮಾರಾಟದಿಂದ 10ರಿಂದ 12 ಲಕ್ಷ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.
ಮೊದಲು ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಒಂದು ತಾಸು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಡುವರು. ಬಳಿಕ ರಘು ದೀಕ್ಷಿತ್ ಹಾಗೂ ತಂಡದವರು ಸುಮಾರು 2 ತಾಸು ಕನ್ನಡ-ಹಿಂದಿ ಹಾಡು-ಸಂಗೀತದ ಮೂಲಕ ರಂಜಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಹಣದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸ್ಮಾರ್ಟ್ ಕ್ಲಾಸ್ ರೂಮ್ಳ ನಿರ್ವಣ, ವಿದ್ಯಾರ್ಥಿಗಳ ಸಬಲೀಕರಣಕ್ಕೆ ತರಬೇತಿ ಹಾಗೂ ಕಾರ್ಯಾಗಾರ ನಡೆಸುವ ಹಾಗೂ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಿರಣ ಹೆಬಸೂರ, ಕಾರ್ಯದರ್ಶಿ ನಿಕೇತ ಸಿಂಘಾನಿಯಾ, ದೀಪಕ ಗಿರಿಯಾಪುರ, ನಿಕೇತ ಹೊನ್ನಳ್ಳಿ ಇದ್ದರು.