₹25.42 ಕೋಟಿ ವೆಚ್ಚದಲ್ಲಿ ದೊಡ್ಡಬಳ್ಳಾಪುರ ರೈಲು ನಿಲ್ದಾಣ ಅಭಿವೃದ್ಧಿ

rail
Renovation of railway station
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆ-2ಅಡಿ 25.42 ಕೋಟಿ ರೂ.ವೆಚ್ಚದಲ್ಲಿ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ನವೀಕರಣ ಮತ್ತು ಆಧುನೀಕರಣ ಕಾರ್ಯಕ್ಕೆ ಪ್ರಧಾನಿ ಮೋದಿ ಹೊಸ ದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.
ಈ ಅಂಗವಾಗಿ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ನವೀಕರಣಕ್ಕೆ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ತಾಲೂಕಿನ ಕಾರ್ಖಾನೆಗಳಿಗೆ ಬಂದು-ಹೋಗಲು ನಿತ್ಯ ಸಾವಿರಾರು ಸಾರ್ವಜನಿಕರು ರೈಲು ಮಾರ್ಗ ಅವಲಂಬಿಸಿದ್ದಾರೆ. ಆದರೆ, ಕೆಲ ರೈಲುಗಳು ನಮ್ಮ ತಾಲೂಕಿನ ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಅನನುಕೂಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು ಎಂದರು.
ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ನಗರಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಕೇಂದ್ರ ಸರ್ಕಾರ ನಿಲ್ದಾಣದ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತರ್ಹ ಎಂದರು.

ಜನತೆಗೆ ಅನುಕೂಲ: ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗುತ್ತಿರುವುದು ಸಂತಸ ತಂದಿದೆ. ರಾಷ್ಟ್ರದ ಬಹುಪಾಲು ಜನತೆ ರೈಲ್ವೆ ಸಾರಿಗೆ ಮಾರ್ಗ ಇಷ್ಟಪಡುತ್ತಾರೆ. ಪ್ರಸ್ತುತ 554 ರೈಲ್ವೆ ನಿಲ್ದಾಣಗಳು ಮರು ಅಭಿವೃದ್ಧಿಯಾಗುತ್ತಿದ್ದು, ದೇಶದ ಜನತೆಗೆ ಅನುಕೂಲವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಣಿ ಲಕ್ಷ್ಮೀನಾರಾಯಣ ಹೇಳಿದರು.
ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ 25.42 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊತ್ತಿಗೊಳ್ಳಲಾಗುವುದು. ಇದರಲ್ಲಿ ಆಧುನಿಕ ತಂತ್ರಜ್ಞಾನದ ಹೊಸ ನಿಲ್ದಾಣ ಕಟ್ಟಡ ನಿರ್ಮಾಣ, ಪ್ರವೇಶ ಮತ್ತು ನಿರ್ಗಮನ ಕಮಾನು, ಶೌಚಗೃಹಗಳು, ಪ್ಲಾಟ್‌ಫಾರಂ ಶೆಲ್ಟರ್ ವಿಸ್ತರಣೆ, ಅಗಲವಾದ ಮೇಲ್ಸೇತುವೆ, ಲಿಫ್ಟ್ ಮತ್ತು ಎಸ್ಕಲೇಟರ್, ವಿದ್ಯುತ್ ಮಾರ್ಗ ನವೀಕರಣ, ಮಾಹಿತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net