

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಕರ್ನಾಟಕದ ಜನರಿಗೆ ಮೂತ್ರಪಿಂಡ ಕಸಿ ಸೇವೆಗಳ ಜತೆಗೆ ಸಮಗ್ರ ಆರೈಕೆ ಒದಗಿಸುವ ನಮ್ಮ ಧ್ಯೇಯ ಪೂರೈಸಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರಂಭಿಸಿರುವ ನವೀಕೃತ ಡಯಾಲಿಸಿಸ್ ಘಟಕವು ಪ್ರಮುಖ ಹೆಜ್ಜೆಯಾಗಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಯ ನಿರಂತರ ಬದ್ಧತೆಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಅಭಿಮತ ವ್ಯಕ್ತಪಡಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾ.28ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀಕರಿಸಿದ ಡಯಾಲಿಸಿಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ ಹೆಗ್ಡೆ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ ವೇಣುಗೋಪಾಲ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಹಾಗೂ ಮೂತ್ರಪಿಂಡ ಶಾಸ್ತ್ರದ ಹಿರಿಯ ತಜ್ಞರು ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆಯ ಡಯಾಲಿಸಿಸ್ ಸೇವೆಗಳು ಪ್ರಮಾಣಿತ ಕೊಡುಗೆಗಳನ್ನೂ ಮೀರಿ ರೋಗಕ್ಕೆ ತುತ್ತಾದ ಮಕ್ಕಳಿಗೆ ವಿಶೇಷ ಹಾಗೂ ನಿರಂತರ ಡಯಾಲಿಸಿಸ್ ಸೇವೆ ಮತ್ತು ಹೋಮ್ ಡಯಾಲಿಸಿಸ್ ಆಯ್ಕೆಯನ್ನೂ ಒದಗಿಸುತ್ತವೆ. ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿಯೂ ಸಹ ಹೊರರೋಗಿ ಮತ್ತು ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಇದು ಈ ಪ್ರದೇಶದ ವ್ಯಾಪ್ತಿಯಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭವಾಗಿ ಮತ್ತು ಅಗತ್ಯವಿರುವ ಆರೈಕೆ ಹಾಗೂ ಸೇವೆಯನ್ನು ಪೂರೈಸುತ್ತವೆ ಎಂದರು.