

ಮುದ್ದೇಬಿಹಾಳ:ತಾಲೂಕಿನ ಚಿರ್ಚನಕಲ್, ಮುದೂರ, ಕಂದಗನೂರ ಗ್ರಾಮ ವ್ಯಾಪ್ತಿಗಳಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ 9ರ ವಿತರಣಾ ಕಾಲುವೆಯ ಹೂಳೆತ್ತುವ, ನವೀಕರಿಸುವ ಕಾರ್ಯ ನಡೆದಿರುವುದು ಶಾಸಕ ಸಿ.ಎಸ್. ನಾಡಗೌಡರ ಪ್ರಯತ್ನ ಕಾರಣವಾಗಿದೆ. ಚುನಾವಣೆಯಲ್ಲಿ ಮಾತು ಕೊಟ್ಟಂತೆ ಶಾಸಕರು ನಡೆದುಕೊಂಡಿದ್ದಾರೆ ಎಂದು ಸಮಾಜ ಸೇವಕ, ಡಾ. ಕಾಬಾ ಮತ್ತು ಡಾ. ಚೌಧರಿ ಕಲ್ಯಾಣ ವೇದಿಕೆ ಸಂಚಾಲಕ ಉಮಾಪತಿ ಚೌಧರಿ ಶ್ಲಾಸಿದ್ದಾರೆ.
ನಾಡಗೌಡರ ವಿಶೇಷ ಕಾಳಜಿ ಮೇರೆಗೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕೆಲಸ ಪ್ರಾರಂಭಿಸಿದ್ದು, ಅನ್ನದಾತರ ಜಮೀನುಗಳಿಗೆ ಇದು ವರದಾನವಾಗಿದೆ. ಆರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾಡಗೌಡರು ತಮ್ಮ ಭಾಷಣಗಳಲ್ಲಿ ಜನತೆಯ ಋಣದಲ್ಲಿ ನಾನಿದ್ದು ಋಣ ತೀರಿಸುವ ಪ್ರಯತ್ನ ಮಾಡುವೆ ಎಂದಿದ್ದರು. ತಡವಾದರೂ ನುಡಿದಂತೆ ನಡೆದುಕೊಂಡಿದ್ದಾರೆ ಎಂದರು.
ಶಾಸಕರ ಪ್ರಯತ್ನದಿಂದಾಗಿ ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಆರಂಭವಾಗಲಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡಬಗ್ಗರು, ಜನಸಾಮಾನ್ಯರು ಅತಿ ಕಡಿಮೆ ದರದಲ್ಲಿ ಅಲ್ಪೋಪಾರ ಮತ್ತು ಊಟದ ವ್ಯವಸ್ಥೆ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಜಿಲ್ಲಾ ನ್ಯಾಯಾಲಯ ಪ್ರಾರಂಭವಾಗಿದೆ ಎಂದಿದ್ದಾರೆ.
ಆರ್‌ಟಿಒ ಕಚೇರಿ, ಇನ್ನೊಂದು ಆರಕ್ಷಕರ ಠಾಣೆ (ಮಹಿಳಾ ಅಥವಾ ಗ್ರಾಮೀಣ) ಅವಶ್ಯಕತೆ ಬಹಳಷ್ಟಿದೆ. ಸದ್ಯ ದೂರದ ವಿಜಯಪುರದಲ್ಲಿರುವ ಆರ್.ಟಿ.ಒ ಕಚೇರಿಗೆ ಅಲೆದಾಡುವುದು ಕಷ್ಟಕರವಾಗುತ್ತಿದೆ. ಅದು ಇಲ್ಲಿಯೇ ಆರಂಭವಾದರೆ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಬೆಳೆಯುತ್ತಿರುವ ಮುದ್ದೇಬಿಹಾಳದ ಭವಿಷ್ಯ ಇಟ್ಟುಕೊಂಡು ಮತ್ತೊಂದು ಆರಕ್ಷಕರ ಠಾಣೆ ಮಂಜೂರು ಆದಲ್ಲಿ ಕಳ್ಳತನ, ದರೋಡೆ, ಭ್ರಷ್ಟಾಚಾರ, ಕೊಲೆ, ಸುಲಿಗೆ, ಜುಜಾಟಗಳಿಗೆ ಕಡಿವಾಣ ಹಾಕಬಹುದಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇವೆರಡು ಸೇವೆಗಳು ಅತ್ಯವಶ್ಯಕ ಎಂದು ಅವರು ತಿಳಿಸಿದ್ದಾರೆ.