

ವಿಜಯಪುರ: ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಬಸವನಾಡು ಎಂದು ಹೆಸರು ಮರುನಾಮಕರಣ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿ, ರಾಜ್ಯದಲ್ಲಿ ಕಳೆದ ೬೦ ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯವನ್ನು ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದ್ದರು. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದರಿಂದ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ. ಇತರ ಎಲ್ಲ ರಾಜ್ಯಗಳಲ್ಲಿಯೂ ವೀರಶೈವ ಲಿಂಗಾಯತರು ರಾಜ್ಯ ಸರ್ಕಾರಗಳ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತವೆ. ನಮ್ಮ ಸಮುದಾಯ ಮಾತ್ರ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕುಮಸಗಿ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ೧೬ ಉಪ ಪಂಗಡಗಳು ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ. ಜನಸಂಖ್ಯಾ ಕೇಂದ್ರದ ಒಬಿಸಿ ಪಟ್ಟಿಯಿಂದ ಹೊರಗುಳಿದಿರುವುದರಿಂದ ಒಟ್ಟು ಸಮಾಜಕ್ಕೆ ಸೌಲಭ್ಯ ದೊರಕಿದಂತಾಗುವುದಿಲ್ಲ. ಇನ್ನೂಳಿದಿರುವ ಉಪಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬನುದೇವಿ ಸಂಕಣ್ಣವರ ಮತ್ತು ಮಹಿಳಾ ಘಟಕದ ನಿರ್ದೇಶಕಿ ಭಾರತಿ ಭುಯ್ಯಾರ ಮಾತನಾಡಿ, ವಿಜಯಪುರ ಜಿಲ್ಲೆ ವಿಶ್ವ ಗುರು ಬಸವಣ್ಣನವರ ಜನ್ಮ ಸ್ಥಳ ಅಲ್ಲದೆ ಇಡೀ ವಿಶ್ವವೇ ಬಸವಣ್ಣವರ ತತ್ವ ಸಿದ್ಧಾಂತಗಳಿಗೆ ತಲೆ ಬಾಗಿದೆ. ಇಂತಹ ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಠಿಯಿಂದ ವಿಜಯಪುರ ಜಿಲ್ಲೆ ಎಂದು ಕರೆಯುವ ಸದರಿ ಜಿಲ್ಲೆಗೆ ಬಸವನಾಡು ಜಿಲ್ಲೆ ಅಥವಾ ಬಸವಪುರ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಮಹಾಸಭಾದ ಗೌರವ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಉಪಾಧ್ಯಕ್ಷ ಬಸಯ್ಯ ಹಿರೇಮಠ, ಮ.ಗು ಯಾದವಾಡ, ಎಂ.ಎ. ಅವರಾದಿ, ಬಿ.ಎಚ್. ಬಾದರದಿಂಡಿ, ಎಸ್.ಜಿ. ನಾಡಗೌಡ, ಶಾರದಾ ಕೊಪ್ಪ, ಸೋಮಶೇಖರ ವಾಲಿ, ಬಿ.ಪಿ. ಪಾಟೀಲ, ಮಹಾಂತೇಶ ಸಂಗಮ, ಸಂಗಮೇಶ ಬದಾಮಿ, ಪ್ರಭುಲಿಂಗ ಕತ್ತಿ, ರವೀಂದ್ರ ಬಿಜ್ಜರಗಿ, ಬಸವರಾಜ ಒಂಟಗೂಡಿ, ಪ್ರಕಾಶ ಕುಂಬಾರ, ರಾಜೇಂದ್ರ ಬಿರಾದಾರ, ಸುಭಾಸ ಯಾದವಾಡ, ಯುವರಾಜ ಚೊಳಕೆ, ಬಿ.ಎಂ. ಪಾಟೀಲ, ತೋಟದ, ಮೇತ್ರಿ ಇನ್ನಿತರರು ಇದ್ದರು.