

ಮಂಗಳೂರು: ಸಮಾಜದ ಏಳಿಗೆಗಾಗಿ ಶ್ರಮಿಸುವ ಬ್ರಾಹ್ಮಣ ಸಮುದಾಯದ ಜನಿವಾರ ತೆಗೆಸುವುದೆಂದರೆ ಅದು ಜೀವನವನ್ನೇ ಹಾಳು ಮಾಡಿದಂತೆ. ಉನ್ನತ ಶಿಕ್ಷಣದ ಆಕಾಂಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸುವ ಮೂಲಕ ಅವರ ಶಿಕ್ಷಣಕ್ಕೆ ಅಡ್ಡಿ ಪಡಿಸಿರುವುದು ಖಂಡನೀಯ ಎಂದು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿರುವ ವಿಚಾರ ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿವಿಧಾನ ಸೌಧದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರತಿನಿಧಿ ಮಹೇಶ್ ಕಜೆ ಮಾತನಾಡಿ, ಜನಿವಾರವೇ ಬ್ರಾಹ್ಮಣರ ಸಂಸ್ಕಾರ. ಸಿಇಟಿ ಪರೀಕ್ಷೆ ವೇಳೆ ಅಧಿಕಾರಿಗಳು ಜನಿವಾರ ತೆಗೆಸಿ ಮಕ್ಕಳ ಜೀವನದ ಜತೆಗೆ ಆಡಿರುವ ಆಟ, ದೇಶದ ಭವಿಷ್ಯದ ಜತೆಗೆ ಆಡಿರುವ ಆಟ. ನಮ್ಮ ತಾಳ್ಮೆಯನ್ನು ಆಸಹಾಯಕತೆ ಎಂದು ತಿಳಿದುಕೊಳ್ಳುವುದು ಬೇಡ. ಸರ್ಕಾರ ಆಗಿರುವ ತಪ್ಪನ್ನು ತಿದ್ದಿಕೊಂಡು ಮುಂದಕ್ಕೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸರ್ಕಾರ ಮೊದಲು ಹಿಂದೂ ಪದ್ಧತಿ ಅನುಷ್ಠಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಈಗಾಗಲೇ ಹಲವು ವಿಧದಲ್ಲಿ ಸರ್ಕಾರ ಹಿಂದೂ ಸಮಾಜದ ಮೇಲೆ ಅನ್ಯಾಯ ಎಸಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಾದರೂ ಆದೇಶಗಳನ್ನು ಹೊರಡಿಸುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು. ಬ್ರಾಹ್ಮಣ ಸಮುದಾಯಕ್ಕೆ ಆಶೀರ್ವಾದ ಮಾಡಲೂ ಗೊತ್ತಿದೆ, ತಕ್ಕ ಉತ್ತರ ನೀಡಲೂ ತಿಳಿದಿದೆ ಎಂದರು.
ಕಟೀಲಿನ ಕಮಲಾ ದೇವಿಪ್ರಸಾದ ಆಸ್ರಣ್ಣ, ಶರವು ದೇವಳದ ಮೊಕ್ತೇಸರ ಶರವು ರಾಘವೇಂದ್ರ ಶಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮಖರಾದ ಪ್ರೊ. ಎಂ.ಬಿ.ಪುರಾಣಿಕ್, ಪಿ.ಎಸ್.ಪ್ರಕಾಶ್, ಹರಿಕೃಷ್ಣ ಪುನರೂರು, ಶ್ರೀಪತಿ ಭಟ್ ಮೂಡುಬಿದಿರೆ, ಟಿ.ಜಿ.ರಾಜಾರಾಮ ಭಟ್, ಸುಮಂಗಳಾ ರಾವ್, ಪ್ರದೀಪ ಕುಮಾರ ಕಲ್ಕೂರ ಮೊದಲಾದವರಿದ್ದರು.
ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಅವರು ಮನವಿ ಸ್ವೀಕರಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ನಿರೂಪಿಸಿದರು.
ಪ್ರತಿಭಟನೆಗೂ ಮೊದಲು ಶರವು ಮಹಾಗಣಪತಿ ದೇವಸ್ಥಾನದ ಆವರಣದಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನೂರಾರು ಮಂದಿ ಸಮಾಜದ ಪ್ರಮುಖರು, ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.