ನಾಲ್ಕು ಪಂಚಾಯಿತಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಡಿ

ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಹೋರಾಟ ಸಮಿತಿ ವತಿಯಿಂದ ಮದ್ದೂರಿನ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಸುನಂದಾ ಜಯರಾಮು, ಲಿಂಗಪ್ಪಾಜಿ, ಅನ್ನದಾನಿ, ಪ್ರಸನ್ನ, ವೀರಪ್ಪ, ಸ್ವಾಮಿ, ಜಿ.ಸಿ.ಮಹೇಂದ್ರ ಇದ್ದರು.
ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಹೋರಾಟ ಸಮಿತಿ ವತಿಯಿಂದ ಮದ್ದೂರಿನ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಸುನಂದಾ ಜಯರಾಮು, ಲಿಂಗಪ್ಪಾಜಿ, ಅನ್ನದಾನಿ, ಪ್ರಸನ್ನ, ವೀರಪ್ಪ, ಸ್ವಾಮಿ, ಜಿ.ಸಿ.ಮಹೇಂದ್ರ ಇದ್ದರು.
Published on

ಮದ್ದೂರು:  ಮದ್ದೂರು ನಗರಸಭೆಗೆ ಸೇರಿಸಬೇಕೆನ್ನುವ ನಾಲ್ಕು ಪಂಚಾಯಿತಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಡುವಂತೆ ಆಗ್ರಹಿಸಿ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಹೋರಾಟ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ನಗರ ಸಭೆಗೆ ನಮ್ಮ ಗ್ರಾಮಗಳನ್ನು ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ರೈತ ನಾಯಕಿ ಸುನಂದಾ ಜಯರಾಮು ಮಾತನಾಡಿ, ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಪಂಗಳನ್ನು ನಗರ ಸಭೆಗೆ ಸೇರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ನೀರಿನ ತೆರಿಗೆ, ಮನೆ ಕಂದಾಯ ಹೆಚ್ಚಾಗುತ್ತದೆ. ವಸತಿ ಯೋಜನೆಗಳು ಕಡಿಮೆಯಾಗುತ್ತದೆ. ನರೇಗಾ ಯೋಜನೆಯ ಸೌಲಭ್ಯಗಳು ಇರುವುದಿಲ್ಲ ಎಂದರು.

ಕನಿಷ್ಠ ವೇತನ ಹಾಗೂ ಉದ್ಯೋಗ ಸಿಗುವುದಿಲ್ಲ. ಇ-ಖಾತೆ ಹಾಗೂ ಅಭಿವೃದ್ಧಿ ತೆರಿಗೆ ದುಟ್ಪಟ್ಟಾಗುತ್ತದೆ. ಸಾರ್ವಜನಿಕ ಆಸ್ತಿಗಳನ್ನು ನೋಂದಣಿ ಮತ್ತು ವಿಭಾಗ ಪತ್ರ ಮತ್ತು ಖರೀದಿ ಶುಲ್ಕಗಳು ಹೆಚ್ಚಾಗುತ್ತದೆ. ನಗರ ಸಭೆಯಾದರೆ ಹಾಲು ಉತ್ಪಾದಕರ ಸಹಕಾರ ಸಂಘಗಳೂ ಇರುವುದಿಲ್ಲ ಎಂದರು.

ಗೊರವನಹಳ್ಳಿ ಪ್ರಸನ್ನ ಮಾತನಾಡಿ, ನಗರಸಭೆಯಾದರೆ ಹೆಚ್ಚು ತೆರಿಗೆ ಕಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ 4 ಗ್ರಾಪಂಗಳನ್ನು ನಗರಸಭೆಗೆ ಸೇರಿಸಿಕೊಳ್ಳುವ ಆಲೋಚನೆಯನ್ನು ಕೈ ಬಿಡಬೇಕು ಎಂದರು.

ರೈತ ಸಂಘದ ಮುಖಂಡ ಲಿಂಗಪ್ಪಾಜಿ ಮಾತನಾಡಿ, 4 ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸಿಕೊಳ್ಳಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಜತೆಗೆ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಆಕ್ಷೇಪಣಾ ಪತ್ರ ಸಲ್ಲಿಸಲಾಗುವುದು ಎಂದರು.

ಪ್ರತಿಭಟನೆಗೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ಬಂದರು. ಬಳಿಕ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಮಾಡಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಅಂದಾನಿ, ಗೊರವನಹಳ್ಳಿ ಪ್ರಸನ್ನ, ವೀರಪ್ಪ, ರಾಮಣ್ಣ, ಚಾಮನಹಳ್ಳಿ ಸ್ವಾಮಿ, ಸಿದ್ದರಾಜು, ಜಿ.ಸಿ.ಮಹೇಂದ್ರ, ನವೀನ, ಅಂಬರೀಷ್, ಸುರೇಶ್ ಮಹೇಶ್, ಸಂತೋಷ, ಯದುನಂದನ್, ಕುಳ್ಳಪ್ಪ, ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net