

ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಖಂಡನೀಯ. ಶ್ರೀಗಳು ನಮ್ಮೆಲ್ಲರಿಗೂ ಎಲ್ಲರಿಗೂ ದೇವರ ಸ್ವರೂಪ. ದೇವರು ಮಾಡದ, ಸರ್ಕಾರ ಮಾಡದ ಕೆಲಸ ಅವರು ಮಾಡಿದ್ದಾರೆ. ಹೀಗಾಗಿ ಕೂಡಲೇ ಅವರ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಕ್ರಾಂತಿವೀರ ಬ್ರಿಗೇಡ್ ನೇತೃತ್ವದ ನಿಯೋಗದೊಂದಿಗೆ ಶುಕ್ರವಾರ ಜಿಲ್ಲಾಡಳಿತಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ ಅವರು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಶ್ರೀಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಕನೇರಿ ಶ್ರೀಗಳು ಹಲವು ದಶಕಗಳಿಂದ ಆಧ್ಯಾತ್ಮ, ಕೃಷಿ, ಗೋ ರಕ್ಷಣೆ, ಭಾರತೀಯ ಸಂಸ್ಕೃತಿ ಪ್ರಸಾರ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದಾರೆ. ಜನರ ಆರೋಗ್ಯಕ್ಕಾಗಿ ಆಯುರ್ವೇದದ ಮೂಲಕ ಪರಿಹಾರ ಕಲ್ಪಿಸುತ್ತಿದ್ದಾರೆ. ಇಂಥ ಮಹಾನ್ ಸಂತರ ವಿಷಯದಲ್ಲಿ ಅಗೌರವದಿಂದ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಸರಿಯಲ್ಲ ಎಂದರು.
ಕ್ರಾಂತಿವೀರ ಬ್ರಿಗೇಡ್ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ, ಅಶೋಕ ಒಡೆಯರ, ವೀರಣ್ಣ ಹಳೆಗೌಡರ, ಕಲ್ಲು ಸೊನ್ನದ, ವೆಂಕಟೇಶ ಕಪ್ಪ, ರಾಹುಲ್ ಔರಂಗಾಬಾದ್, ಕಾಶೀನಾಥ ಒಡೆಯರ ಮತ್ತಿತರರಿದ್ದರು.