

ಕಿಕ್ಕೇರಿ: ರೈತರ ಕೃಷಿ ಚಟುವಟಿಕೆಗೆ ಉಸಿರಾಗಿರುವ ನೀರು ಅಮೂಲ್ಯವಾಗಿದ್ದು, ಸಕಾಲಕ್ಕೆ ನಾಲೆ ಮೂಲಕ ನೀರು ರೈತರಿಗೆ ಸಿಗದಿದ್ದರೆ ಬದುಕುವುದು ಹೇಗೆ ಎಂದು ರಾಜ್ಯ ಕೈಮಗ್ಗ ನಿಗಮದ ನೂತನ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಹೇಳಿದರು.
ಹೇಮಾವತಿ ಅಣೆಕಟ್ಟೆಯಿಂದ ಸಮೀಪದ ಮಂದಗೆರೆಯಲ್ಲಿ ಹಾದು ಹೋಗುವ ಎಡದಂಡೆ ನಾಲೆ ಏರಿ, ಸೇತುವೆ, ರಸ್ತೆ, ರೈತರು ಓಡಾಡಲು ಬಳಸುವ ಜಾಡು ಪ್ರದೇಶವನ್ನು ಇತ್ತೀಚೆಗೆ ವೀಕ್ಷಿಸಿ ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಲೆ ಬಳಿ ತಿರುಗಿ ನೋಡಿದಂತೆ ಕಾಣುತ್ತಿಲ್ಲ. ನಾಟನಹಳ್ಳಿ ಬಳಿ ನಾಲೆಯಲ್ಲಿ ಮಾಳ ಬಿದ್ದು ನೀರು ಪೋಲಾಗುತ್ತಿದೆ. ಹಲವೆಡೆ ಭತ್ತದ ಕಾಳು ಕಟ್ಟುವ ವೇಳೆ ಬೆಳೆಗೆ ನೀರು ಅಗತ್ಯವಾಗಿದೆ. ಈ ವೇಳೆ ನೀರು ಸಿಗದಿದ್ದರೆ ಕೈಗೆ ಬಂದ ಬೆಳೆ ಸಿಗದೆ ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಹಲವೆಡೆ ಮಳೆ ಬಂದು ನಾಲೆ ರಸ್ತೆ ಗುಂಡಿ ಬಿದ್ದಿವೆ. ಮಂದಗೆರೆ ಬಲದಂಡೆ ನಾಲೆ ಸುಮಾರು 53 ಕಿ.ಮೀ. ಉದ್ದವಿದೆ. ನಾಲೆ ಹೂಳು ತೆಗೆಯಲು 9.5 ಲಕ್ಷ ರೂ. ಬಿಡುಗಡೆ ಮಾಡಿದೆ. ಅವಶ್ಯವಿರುವ ಸ್ಥಳದಲ್ಲಿ ನೀರು ಸರಾಗವಾಗಿ ಹರಿಯಲು ಹೂಳು ತೆಗೆಯುವ ಕೆಲಸಕ್ಕೆ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು.
ದಶಕದ ಹಿಂದೆ ನಾಲೆ ಆಧುನೀಕರಣ ಆಗಿದೆ. ಕೆಲವು ತೂಬು, ಸೇತುವೆ ಉತ್ತಮವಾಗಿದೆ ಎಂದು ದುರಸ್ತಿ ಕಂಡಿಲ್ಲ. ಸರ್ಕಾರಕ್ಕೆ ವಾಸ್ತವ ತಿಳಿಸಿ ನಾಲೆ ದುರಸ್ತಿಗೆ ಅವಶ್ಯ ಇರುವುದನ್ನು ಅಧಿಕಾರಿಗಳು ವರದಿ ಮಾಡಲು ಮುಂದಾಗಿ. ನಾನು ಒಬ್ಬ ರೈತನಾಗಿ ತಾಲೂಕಿನ ರೈತರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಲು ಸರ್ಕಾರಕ್ಕೆ ಸಮಸ್ಯೆಗಳನ್ನು ಮನವರಿಕೆ ಮಾಡಿ ಪರಿಹರಿಸಲು ಎಂದರು.
ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ ಕಾರ್ಯಕರ್ತನಾಗಿ ಸಂತಸ ತಂದಿದೆ. ಎಲ್ಲರ ಮಾರ್ಗದರ್ಶನ, ಸಲಹೆಯೊಂದಿಗೆ ತಾಲೂಕಿಗೆ ಆಗಬೇಕಿರುವ ಸವಲತ್ತು, ಸೌಲಭ್ಯ, ನೇಕಾರರ ಸಮಸ್ಯೆಗೆ ಸ್ಪಂದಿಸಲು ಬದ್ಧನಿರುವುದಾಗಿ ನುಡಿದರು.
ತಾಪಂ ಮಾಜಿ ಸದಸ್ಯ ನಾಟನಹಳ್ಳಿ ನಿಂಗೇಗೌಡ, ಕಾಂಗ್ರೆಸ್ ಮುಖಂಡ ರವೀಂದ್ರನಾಥ್, ಆಕಾಶ್, ಚೇತನ್, ಕಾರ್ತಿಕ್, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.