ಬಸ್ ನಿಲ್ದಾಣದಲ್ಲಿ ನಿರ್ಬಂಧ ಸರಿಸಿ ಯಥಾಸ್ಥಿತಿ ಕಾಪಾಡಿ

5Dbp1BusProtest
ದೊಡ್ಡಬಳ್ಳಾಪುರದ ಹಳೇ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲ್ದಾಣ ಉಳಿಸುವಂತೆ ಆಗ್ರಹಿಸಿ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್, ಬೆಂಗಳೂರು ನಗರ ಅಧ್ಯಕ್ಷ ಕುಮಾರಸ್ವಾಮಿ, ಮೊದಲಿಯಾರ್, ಗಿತೇಶ್, ರುದ್ರಪ್ಪ, ರಾಮಕೃಷ್ಣಪ್ಪ, ಶಿವಕುಮಾರ್, ಪ್ರಶಾಂತ್ ಇದ್ದರು.
Published on

ನಗರಸಭೆಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಆಗ್ರಹ - ರಾತ್ರೋ ರಾತ್ರಿ ಫಲಕ ಅಳವಡಿಕೆಗೆ ವಿರೋಧ

ದೊಡ್ಡಬಳ್ಳಾಪುರ: ಬಿಎಂಟಿಸಿ ಸಂಸ್ಥೆಯವರಿಗೆ ಅನುಕೂಲ ಕಲ್ಪಿಸಲು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತ ಖಾಸಗಿ ಬಸ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ನಾಮಫಲಕ ಅಳವಡಿಸಿದ್ದು, ಕೂಡಲೇ ಈ ನಾಮಫಲಕವನ್ನು ನಗರಸಭೆ ತೆರವುಗೊಳಿಸಬೇಕು ಎಂದು ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ವಿಕ್ರಮ್ ಆಗ್ರಹಿಸಿದರು.

ನಗರದ ಹಳೇ ಬಸ್ ನಿಲ್ದಾಣದಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಗರಸಭೆಯಿಂದ ಅಳವಡಿಸಿರುವ ಫಲಕ ತೆರವು ಮಾಡಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ನಾವು ಸರ್ಕಾರದ ಪರವಾನಿಗೆಯಂತೆ ಖಾಸಗಿ ಬಸ್ ನಿಲ್ದಾಣವಾಗಿಸಿಕೊಂಡು 1955ರಿಂದಲೂ ಪ್ರತಿನಿತ್ಯ ಬಸ್ ನಿಲುಗಡೆ ಮಾಡುತ್ತಿದ್ದೇವೆ. ನಗರಸಭೆಗೆ ಪ್ರತಿ ಬಸ್‌ಗೂ ಇಂತಿಷ್ಟು ಸುಂಕವನ್ನು ಪಾವತಿಸಿದ್ದೇವೆ. ಹಳೆಯ ಬಸ್ ನಿಲ್ದಾಣಕ್ಕೆ ಬೆಂಗಳೂರು, ನೆಲಮಂಗಲ, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ, ತಿರುಪತಿ ಸೇರಿ ಹಲವು ನಗರಗಳಿಂದ ನೂರಾರು ಖಾಸಗಿ ಬಸ್‌ಗಳು ಬಂದು ಹೋಗುತ್ತವೆ. ಈ ಎಲ್ಲ ಬಸ್‌ಗಳು ಈ ಪ್ರದೇಶವನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿವೆ. ಆದರೆ ಎರಡು-ಮೂರು ದಿನಗಳ ಹಿಂದೆ ಖಾಸಗಿ ಬಸ್‌ಗಳಿಗೆ ನಿರ್ಬಂಧ ಹಾಗೂ ಪ್ರವೇಶಿಸಿದರೆ ದಂಡ ವಿಧಿಸುವುದಾಗಿ ಒಂದು ಎಚ್ಚರಿಕೆ ಸಂದೇಶದ ಅನಧಿಕೃತ ನಾಮಫಲಕ ಅಳವಡಿಸಿದ್ದಾರೆ. ಈ ವಿಷಯದ ಬಗ್ಗೆ, ಸರ್ಕಾರವಾಗಲಿ, ದೊಡ್ಡಬಳ್ಳಾಪುರ ನಗರಸಭೆಯಿಂದ ಯಾವುದೇ ರೀತಿಯ ಪ್ರಕಟಣೆ ಅಥವಾ ನೋಟಿಸ್ ನೀಡಿಲ್ಲ. ಈ ದೌರ್ಜನ್ಯವನ್ನು ಖಂಡಿಸುತ್ತೇವೆ. ಕರೊನಾ ಮತ್ತು ಸರ್ಕಾರದ ಮಹಿಳೆಯರಿಗೆ ಉಚಿತ ಸಾರಿಗೆ ಯೋಜನೆಯಿಂದ ಶೇ.90ರಷ್ಟು ವ್ಯವಹಾರ ನಿಂತಿದೆ. ಇಂದಲ್ಲ ನಾಳೆ ಒಳ್ಳೆ ಬೆಲೆ ಬರುವ ನಂಬಿಕೆಯಿಂದ ಬದುಕುವ ರೈತರಂತೆ ನಾವು ಒಳ್ಳೆಯ ದಿನಗಳು ಬರುವ ಆಶಾಭಾವನೆಯಿಂದ ಬದುಕುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಸಂಘದ ಬೆಂಗಳೂರು ಅಧ್ಯಕ್ಷ ಕುಮಾರಸ್ವಾಮಿ ಮೊದಲಿಯಾರ್ ಮಾತನಾಡಿ, ನಗರಸಭೆಯು ಅನಧಿಕೃತ ನಾಮಫಕಲವನ್ನು ಕೂಡಲೇ ತೆರವುಗೊಳಿಸಬೇಕು. ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net