

ತೀರ್ಥಹಳ್ಳಿ: ಗ್ರಾಮೀಣ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮತ್ತು ಅವರಲ್ಲಿ ಇರಬಹುದಾದ ಕೀಳರಿಮೆಯನ್ನು ಹೋಗಲಾಡಿಸುವ ಪ್ರಯತ್ನ ಜನಪ್ರತಿಧಿಗಳಾದ ನಮಗೆ ತೃಪ್ತಿ ತರುವಂತೆ ಇರಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಮುಳುಬಾಗಿಲು ಗ್ರಾಪಂ ವ್ಯಾಪ್ತಿಯ ಬಿಳಾಲು ಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 34 ವಿದ್ಯಾರ್ಥಿಗಳಿಗೆ ವೈಯಕ್ತಿಕ ತಲಾ ಒಂದು ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಿ ಅವರು ಮಾತನಾಡಿದರು.
ಈ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದ್ದು, ಇಲ್ಲಿನ ಶಿಕ್ಷಕರ ಕಾರ್ಯವೈಖರಿ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡ ಕುಟುಂಬದ ಹಿನ್ನೆಲೆಯ ನನಗೆ ಅನ್ನ, ಬಟ್ಟೆ ನೀಡಿ ಬದುಕನ್ನು ರೂಪಿಸಿದ ಪುಣ್ಯಾತ್ಮರಿಂದಾಗಿ ನಾನು ಇಂದು ಈ ಸ್ಥಾನಕ್ಕೇರಲು ಸಾಧ್ಯವಾಯಿತು. ಅವಕಾಶ ದೊರೆತಲ್ಲಿ ಬಡವರು ಯಾವ ಎತ್ತರಕ್ಕೆ ಏರಬಹುದು ಎಂಬುದಕ್ಕೆ ಚಾ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದು ಪ್ರಧಾನಿ ಸ್ಥಾನಕ್ಕೇರಿರುವ ನರೇಂದ್ರ ಮೋದಿ ಅವರೇ ಉದಾಹರಣೆ. ಜಾಗತಿಕವಾಗಿ ಹಾವಾಡಿಗರ ಬಡ ದೇಶವೆಂದು ಅಪಹಾಸ್ಯಕ್ಕೀಡಾಗಿದ್ದ ಈ ದೇಶದ ಘನತೆಯನ್ನು ಎತ್ತಿ ಹಿಡಿಯುವುದು ಸಾಮಾನ್ಯದ ಮಾತಲ್ಲ. ಒಂದು ದೇಶದ ಅಧ್ಯಕ್ಷರಾದವರು ಮೋದಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿರುವುದು ಈ ದೇಶದ 140 ಕೋಟಿ ಜನರಿಗೆ ಸಂದ ಗೌರವವೂ ಆಗಿದೆ ಎಂದು ಹೇಳಿದರು.
ಮುಳುಬಾಗಿಲು ಗ್ರಾಪಂ ಅಧ್ಯಕ್ಷ ಬಿ.ಆರ್.ಮೋಹನ್, ಉಪಾಧ್ಯಕ್ಷೆ ಛಾಯಾ ಅಶೋಕ್, ತಾಪಂ ಮಾಜಿ ಸದಸ್ಯೆ ಗೀತಾ ಶೆಟ್ಟಿ, ಬಿಇಒ ವೈ.ಗಣೇಶ್, ಹೊಸಳ್ಳಿ ಮಂಡಲ ಮಾಜಿ ಪ್ರಧಾನ ಕೊಡಸಗೊಳ್ಳಿ ಶ್ಯಾಮಣ್ಣ ಇತರರಿದ್ದರು.