

ಜಮಖಂಡಿ: ಥಾವರಚಂದ್ ಗೆಹಲೋತ್ ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಹಳೇ ತಹಸೀಲ್ದಾರ್ ಕಚೇರಿಯಿಂದ ಎಜಿ ದೇಸಾಯಿ ವೃತ್ತದವರೆಗೆ ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಆಶ್ರಯದಲ್ಲಿ ಬಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್ 2ತಹಸೀಲ್ದಾರ್ ಕೆ.ವೈ.ಬಿದರಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬಿಜೆಪಿಯವರಂತೆ ಆಪರೇಷನ್‌ನಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಿಲ್ಲ. ಜನರಿಂದ ಬಹುಮತದೊಂದಿಗೆ ಸರ್ಕಾರ ರಚನೆಯಾಗಿದೆ. ಆದರೆ, ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸಲು ನಡೆಸಿರುವ ಹುನ್ನಾರ ಯಾವುದೇ ಕಾಲಕ್ಕೂ ಲಿಸುವದಿಲ್ಲ ಎಂದರು.
ನಿಮ್ಮವರಂತೆ ನಮ್ಮವರು ಯಾರೂ ಲಂಚ ತೆಗೆದುಕೊಂಡಿಲ್ಲ, ತೆಗೆದುಕೊಳ್ಳುವೂದು ಇಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದರು.
ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚಿಸಿ ಒಪ್ಪಿಗೆ ನೀಡಿದ 15 ಬಿಲ್‌ಗಳನ್ನು ರಾಜ್ಯಪಾಲರು ತಿರಸ್ಕರಿಸುವ ಮೂಲಕ ರಾಜ್ಯಪಾಲರು ನಾಡಿನ ಜನತೆಗೆ ಅವಮಾನಿಸಿದ್ದಾರೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಕಟ್ಟಿಕೊಂಡ ತೆರಿಗೆ ಹಣದಲ್ಲಿ ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನ ನೀಡದೆ ಮೋಸ ಮಾಡುತ್ತಿದೆ. ಇಲ್ಲಿನ ಬಿಜೆಪಿ ಮುಖಂಡರಿಗೆ ಜನರ ಬಗ್ಗೆ ಬಹಳಷ್ಟು ಕಾಳಜಿ ಇದ್ದರೆ ನಮ್ಮ ಪಾಲಿನ ಅನುದಾನ ತರುವ ಕಾರ್ಯ ಮಾಡಿ ತೋರಿಸಲಿ ಎಂದರು.
ಹಿಂದುಳಿದ ವರ್ಗದ ನಾಯಕ, ನಿಷ್ಕಳಂಕ ವ್ಯಕ್ತಿ, ಪ್ರಾಮಾಣಿಕ ಸಿಎಂ ಸಿದ್ದರಾಮಯ್ಯ ಹೆಸರು ಕೆಡಿಸಲು ರಾಜ್ಯಪಾಲರನ್ನು ತಮ್ಮ ಕೈಗೊಂಬೆಯನ್ನಾಗಿ ಬಿಜೆಪಿಯವರು ಮಾಡಿಕೊಂಡಿದ್ದಾರೆ. ಮುಡಾ ಕೇಸ್‌ನಲ್ಲಿ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೆ ಸುಳ್ಳು ದಾಖಲೆಗಳ ಮೂಲ ಸಂವಿಧಾನ ಬಾಹಿರ ಕೆಲಸ ಮಾಡಿದ್ದಾರೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಪರ ರಾಜ್ಯದ ಗಲ್ಲಿಗಲ್ಲಿಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಬಿಜೆಪಿಯವರು ವಾಮಮಾರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೆಡಿಸಲು ಮುಂದಾಗಿದ್ದಾರೆ. ಆದರೆ, ಅದು ಅವರಿಗೆ ತಿರುಮಂತ್ರವಾಗಲಿದೆ ಎಂದರು.
ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ರೈತ ಮುಖಂಡ ಬಿ.ಎಸ್.ಸಿಂಧೂರ, ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಸಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ಮುಖಂಡ ಕಾಡು ಮಾಳಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಮುಖಂಡರಾದ ತೌಫೀಕ ಪಾರ್ಥನಳ್ಳಿ, ಹಾಜಿ ಇಲಾಹಿ ಕಂಗನೊಳ್ಳಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಸಮೀರ ಕಂಗನೊಳ್ಳಿ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ರಫೀಕ ಬಾರಿಗಡ್ಡಿ, ಅರ್ಜುನ ದಳವಾಯಿ, ರವಿ ಯಡಹಳ್ಳಿ, ಅಬೂಬಕರ ಕುಡಚಿ, ಭರತೇಶ ಮೂಕನವರ ಇದ್ದರು.