

ಹುಬ್ಬಳ್ಳಿ: ರಾಜ್ಯದಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, 2015ರ ನಂತರ ಅರಣ್ಯ ಅತಿಕ್ರಮಣವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಕೆನರಾ ವೃತ್ತದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
3 ಎಕರೆಗಿಂತ ಹೆಚ್ಚು ಭೂಮಿ ಅತಿಕ್ರಮಣ ಮಾಡಿದವರು ಹಾಗೂ ಶ್ರೀಮಂತರ ಒತ್ತುವರಿ ಮೊದಲು ತೆರವು ಮಾಡಿಸಬೇಕು. ಸೆಕ್ಶನ್ 4ರ ಅಡಿ ಬರುವ ಪ್ರಕರಣಗಳನ್ನು ಶ್ರೀ ವಿಲೇವಾರಿ ಮಾಡಿ, ಮೀಸಲು ಅರಣ್ಯ ಎಂದು ಘೋಷಣೆ ಮಾಡಬೇಕು ಎಂದರು.
ಕಳಸಾ ನಾಲಾ ತಿರುವು ಯೋಜನೆಗೆ ಸಂಬಂಧಿಸಿ ಇಲಾಖೆಯಿಂದ ತಕ್ಷಣದ ಸ್ಪಂದನೆ ಬೇಕು. ಕೇಂದ್ರ ಸರ್ಕಾರ ಕೇಳುವ ಪ್ರತಿ ಮಾಹಿತಿ ಕೂಡಲೇ ನೀಡಿ, ಯಾವುದೇ ಕಾರಣಕ್ಕೂ ಇಲಾಖೆಯಿಂದ ವಿಳಂಬ ಎಂಬ ಮಾತು ಬರಬಾರದು ಎಂದು ಸಲಹೆ ನೀಡಿದರು.
ಶೇ. 10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುವ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದ ಸಚಿವರು, ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು, ಸಲಹೆ ಸೂಚನೆ ನೀಡಿದರು.
ಧಾರವಾಡದ ಗುಂಗಾರಗಟ್ಟಿ ಅರಣ್ಯ ಪ್ರದೇಶದಲ್ಲಿ ಆರ್ ಎಫ್ಒಗಳಿಗೆ ತರಬೇತಿ ಕೇಂದ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲು ಸೂಚನೆ ನೀಡಿದರು.
ಪ್ರಭಾವಿ ಸಚಿವರು ಪ್ರಯತ್ನಿಸಲಿ: ಕಳಸಾ ನಾಲಾ ತಿರುವು ಯೋಜನೆಯ ವಿಷಯವನ್ನು ರಾಷ್ಟ್ರೀಯ ವನ್ಯಜಿವಿ ಮಂಡಳಿಯು ಮುಂದೂಡಿದೆ. ಈ ಬಗ್ಗೆ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆ ಜಾರಿಗೆ ಪ್ರಯತ್ನಿಸಬೇಕು ಎಂದು ಸಚಿವ ಖಂಡ್ರೆ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಮಹದಾಯಿ ನೀರು ತರಲು ಯತ್ನಿಸಬೇಕು ಎಂದು ಸಲಹೆ ನೀಡಿದರು.