ಉಡುಪಿಯಲ್ಲಿ ಅಪಾಯಕಾರಿ ಸಿಗ್ನಲ್​ ಲೈಟ್​ ಕಂಬಗಳ ತೆರವು

Signal 1
Published on

ಪೊಲೀಸರಿಂದ ತೆರವು ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದ ರಸ್ತೆಗಳ ಪಕ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಅನುಪಯುಕ್ತ ಸಿಗ್ನಲ್​ ಲೈಟ್​ ಕಂಬಗಳ ತೆರವು ಕಾರ್ಯಾಚರಣೆ ನಡೆಯಿತು.

ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿ ಹರಿರಾಮ ಶಂಕರ್​ ನೇತೃತ್ವದಲ್ಲಿ ನಗರದ ವಿವಿಧೆಡೆ ಇದ್ದ ಅನುಪಯುಕ್ತ ಕಂಬಗಳನ್ನು ಕ್ರೇನ್​ ಬಳಸಿ ಜುಲೈ 27ರಂದು ತೆರವು ಮಾಡಲಾಯಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲಸಮಯ ವಾಹನ ಸಂಚಾರ ನಿಯಂತ್ರಿಸಲಾಗಿತ್ತು.

Signal 2
ನಗರದ ಮುಖ್ಯ ರಸ್ತೆಗಳ ಸರ್ಕಲ್​ಗಳಲ್ಲಿ ದಶಕದ ಹಿಂದೆ ಸಿಗ್ನಲ್​ ಲೈಟ್​ ಕಂಬಗಳನ್ನು ಜಿಲ್ಲಾಡಳಿತ ಅಳವಡಿಸಿತ್ತು. ಕೆಲವು ತಿಂಗಳು ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಸಿಗ್ನಲ್​ ಲೈಟ್​ ಕಂಬಗಳು ಎರಡು ವರ್ಷದಿಂದ ತಮ್ಮಕೆಲಸ ನಿಲ್ಲಿಸಿದ್ದವು.

ಕಬ್ಬಿಣದ ಕಂಬಗಳಾಗಿದ್ದರಿಂದ ತುಕ್ಕು ಹಿಡಿದಿತ್ತು. ನಿರಂತರ ಮಳೆ-ಗಾಳಿಗೆ ಉರುಳಿ ಬೀಳುವ ಸ್ಥಿತಿಯಲ್ಲಿದ್ದವು. ಅಂತಹ ಸಿಗ್ನಲ್​ ಕಂಬಗಳನ್ನು ತೆರವುಗೊಳಿಸಿ ಸಂಭವನೀಯ ದುರಂತ ತಪ್ಪಿಸಬೇಕೆಂದು ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ​ ಮೇಸ್ತ ಶಿರೂರು ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದರು.

ಉಡುಪಿ ನಗರದ ಸರ್ಕಲ್​ಗಳಲ್ಲಿ ಅನುಪಯುಕ್ತವಾಗಿರುವ ಹಳೆಯ ಸಿಗ್ನಲ್​ ಲೈಟ್​ ಕಂಬಗಳನ್ನು ತೆರವು ಮಾಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ತೆರವು ಮಾಡಲಾಗಿದೆ. ಪ್ರಮುಖ ಮೂರು ಜಂಕ್ಷನ್​ಗಳಲ್ಲಿ ಮತ್ತೆ ಹೊಸ ಸಿಗ್ನಲ್​ ಕಂಬ ಅಳವಡಿಸಲು ಟೆಂಡರ್​ ಕರೆಯಲಾಗಿದೆ. ಇನ್ನಿತರ ಪ್ರಮುಖ ರಸ್ತೆಯಲ್ಲೂ ಸಿಗ್ನಲ್​ ಅಳವಡಿಸುವ ಕುರಿತು ಪರಿಶೀಲನೆ ನಡೆಸಲಾಗುವುದು. | ಮಹಾಂತೇಶ ಹಂಗರಗಿ. ಉಡುಪಿ ನಗರಸಭಾ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net