

ಮಹಾಲಿಂಗಪುರ: ಪಟ್ಟಣದ ಕೆಂಗೇರಮಡ್ಡಿಯ 13ನೇ ವಾರ್ಡ್‌ನ ಕಂದಾಯ ಇಲಾಖೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಶೆಡ್‌ಗಳನ್ನು ಮಂಗಳವಾರ ಬೆಳಗ್ಗೆ ರಬಕವಿ-ಬನಹಟ್ಟಿ ತಹಸೀಲ್ದಾರ ಗಿರೀಶ ಸ್ವಾದಿ ನೇತೃತ್ವದಲ್ಲಿ ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು.
ಕೆಂಗೇರಿ ಮಡ್ಡಿ ಬಡಾವಣೆಯ ಸಾಯಿ ಮಂದಿರ ಹಿಂದೆ ಇರುವ 3 ಎಕರೆ 6 ಗುಂಟೆ ಜಾಗದಲ್ಲಿ 33 ಕುಟುಂಬಗಳು ಹಲವಾರು ವರ್ಷಗಳಿಂದ ಅನಧಿಕೃತವಾಗಿ ಪತ್ರಾಸ್ ಶೆಡ್ ನಿರ್ಮಿಸಿಕ್ಕೊಂಡು ಜೀವನ ಸಾಗಿಸುತ್ತಿದ್ದರು.
ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಜೆಸಿಬಿ, ಭದ್ರತೆಗೆ ಪೊಲೀಸ್ ಮತ್ತು ವಿದ್ಯುತ್ ಕಡಿತಗೊಳಿಸಲು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತಾಲೂಕಾಡಳಿತ ಸೋಮವಾರ ರಾತ್ರಿಯೇ ವ್ಯವಸ್ಥೆ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ.
ಇದನ್ನು ಮನಗಂಡ ಸಂತ್ರಸ್ತರು ಯಾವ ಸಮಯದಲ್ಲಾದರೂ ತಮ್ಮ ಮನೆಗಳ ಮೇಲೆ ಗದಾ ಪ್ರಹಾರ ನಡೆಸಬಹುದು ಎಂಬ ಹೆದರಿಕೆಯಲ್ಲಿ ರಾತ್ರಿಯಿಡೀ ಮಲಗದೆ ಮನೆಗಳ ಹೊರಗೆ ಜಾಗರಣೆ ಮಾಡಿದ್ದರು. 5-6 ಲಕ್ಷಕ್ಕಿಂತ ಅಧಿಕ ಹಣ ಖರ್ಚುಮಾಡಿ ನಿರ್ಮಿಸಿದ್ದ ಶೆಡ್‌ಗಳನ್ನು ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ ಪರಿಣಾಮ ಅಲ್ಲಿಯ ನಿವಾಸಿಗಳು ಕಣ್ಣೀರಕೋಡಿ ಹರಿಸಿದರು.
ಕಾರ್ಯಾಚರಣೆಯಲ್ಲಿ ಜಮಖಂಡಿ ಡಿವೈಎಸ್‌ಪಿ ಜಮೀರ ರೋಷನ್, ಬನಹಟ್ಟಿ ಸಿಪಿಐ ಸಂಜೀವ ಬಳಗಾರ ನೇತೃತ್ವದಲ್ಲಿ 200 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ತಾಲೂಕು ಆಡಳಿತ ಹಾಗೂ ಹೆಸ್ಕಾಂ ಸಿಬ್ಬಂದಿ ಭಾಗಿಯಾಗಿದ್ದರು.
ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದವರಿಗೆ ಬೇರೆಡೆ ಸೂರು ಕಲ್ಪಿಸಿ ತೆರವುಗೊಳಿಸಬೇಕಾಗಿತ್ತು. ಏಕಾಏಕಿ ತೆರವುಗೊಳಿಸಿದರೆ ಅವರು ಎಲ್ಲಿ ಹೋಗಬೇಕು. ಈಗ ಹಲವರಿಗೆ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲು ತಿಳಿಸಿರುವೆ. ನಾನು ಬೆಂಗಳೂರಿನಲ್ಲಿದ್ದು ವಾಪಸಾದ ನಂತರ ನಿರಾಶ್ರಿತರನ್ನು ಭೇಟಿ ಮಾಡುವೆ. ವೀಣಾ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷರು ಬಾಗಲಕೋಟೆ. ತಾಲೂಕು ಆಡಳಿತದ ಕಾರ್ಯಾಚರಣೆ ಬಗ್ಗೆ ನನಗೆ ಗೊತ್ತಿರಲಿಲ್ಲ. ತಡವಾಗಿ ಗೊತ್ತಾಯಿತು. ಮನೆ ಕಳಕೊಂಡವರಿಗೆ ಬೇರೆಡೆ ಜಾಗ ಇಲ್ಲದಿದ್ದರೆ ಮನಿ ಲೇಔಟ್ ಮಾಡಿ ಕೊಡಲಾಗುವುದು. ಸಿದ್ದು ಸವದಿ, ಶಾಸಕರು ತೇರದಾಳ ಮತಕ್ಷೇತ್ರ.