

ರಾಯಚೂರು ಹಾಷ್ಮೀಯಾ ಮಸೀದಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರದ ವಕ್ಪ್ ನ ಹಾಸ್ಮೀಯಾ ಮಸೀದಿಗೆ ಆಸ್ತಿಗೆ ಸೇರಿದ 3 ಎಕರೆ ಸ್ಥಳದಲ್ಲಿ 1989ರ ಹಿಂದಿನಿಂದಲೂ ನಿವಾಸಿಗಳು ವಾಸವಿದ್ದರು. ಅದಾದ ನಂತರ ಹಾಷ್ಮೀಯಾ ಮಸೀದಿಯಿಂದ ಅನಧಿಕೃತ ನಿವಾಸಿಗಳನ್ನು ತೆರವುಗೊಳಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಅದರಂತೆ 1989ರಲ್ಲಿ ಕೋರ್ಟ್ ತೆರವುಗೊಳಿಸುವ ಆದೇಶವನ್ನು ನೀಡಿತ್ತು. ಇದನ್ನು ವಿರೋಧಿಸಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳಿಂದ ಜಿಲ್ಲಾ ನ್ಯಾಯಾಲಯಕ್ಕೆ ತಡೆಯಾಜ್ಞೆಗಾಗಿ ಅಪೀಲ್ ಮಾಡಲಾಗಿತ್ತು. ಆದರೆ 1992ರಲ್ಲಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆಯನ್ನು ರದ್ದುಗೊಳಿಸಿ ತೆರವುಗೊಳಿಸುವ ಆದೇಶ ಸರಿಯಿದೆ ತೆರವುಗೊಳಿಸಿ ಎಂದು ಮರು ಆದೇಶಿಸಿತ್ತು.
ನಂತರ 1997ರಲ್ಲಿ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ತಡೆಯಾಜ್ಞೆಗಾಗಿ ಮನವಿ ಮಾಡಿದ್ದರು. ಹೈಕೋರ್ಟ್ ಕೂಡ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು.
ತೆರವಿಗೆ ಆದೇಶಿಸಿತ್ತು. 1997ರಲ್ಲಿಯೇ ಮತ್ತೆ ಈ ಪ್ರಕರಣ ದ್ವಿ ಪೀಠ ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು.
ಅಲ್ಲಿಯೂ ಕೂಡ ಈ ಪ್ರಕರಣ ರದ್ದಾಯಿತು. 2016ರಲ್ಲಿ ಈ ಪ್ರಕರಣ ವಕ್ಫ್ ನ್ಯಾಯಾಲಯದ ಮುಂದೆ ಇತ್ತು. ಇದೀಗ ಮೇ.13ರಂದು ವಕ್ಫ್ ನ್ಯಾಯಾಲಯದಿಂದ ಕರ್ನಾಟಕ ಸಾರ್ವ ಜನಿಕ ಆಸ್ತಿ(ಅನಧೀಕೃತ ನಿವಾಸಿಗಳ ತೆರವು) ಅಧಿನಿಯಮ 1974ರ ಸೆಕ್ಷನ್ 5(2)ರನ್ವಯ ಹಾಷ್ಮೀಯಾ ಮಸೀದಿಯ ಆವರಣದಲ್ಲಿ ಅಥವಾ ಆಸ್ತಿಯಲ್ಲಿ ವಾಸವಿರುವ, ವ್ಯಾಪಾರ ಮಾಡುತ್ತಿರುವ ಅನಧಿಕೃತ ಮನೆಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಿ ಎಂದು ಆದೇಶ ನೀಡಿದೆ.
ಆದೇಶದನ್ವಯ ಸಹಾಯಕ ಆಯುಕ್ತ ಗಜಾನನ ಬಾಲೆ, ತಹಸೀಲ್ದಾರ್ ಸುರೇಶ ವರ್ಮಾ, ಪಾಲಿಕೆ ಉಪ ಆಯುಕ್ತ ಗುರುಸಿದ್ದಯ್ಯ ಹಿರೇಮಠ, ಎಎಸ್ಪಿ ಹರೀಶ್, ಜಿಲ್ಲಾ ವಕ್ಪ್ ಅಧಿಕಾರಿ ಕಲೀಲ್ ಪಾಷ, ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನಾ ಪರೀದ್ ಖಾನ್ ನೇತೃತ್ವದಲ್ಲಿ ತೆರೆವು ಪ್ರಕ್ರಿಯೆ ಆರಂಭವಾಗಿ ಅನಧೀಕೃತವಾಗಿ ನಿರ್ಮಿಸಲಾಗಿದ್ದ 31ಕ್ಕೂ ಹೆಚ್ಚಿನ ಮನೆಗಳಲ್ಲಿ 8 ಮನೆಗಳಲ್ಲಿ ಜನರು ವಾಸವಿದ್ದರು. ಇದಲ್ಲದೇ 25ಕ್ಕೂ ಹೆಚ್ಚಿನ ಅಂಗಡಿಗಳನ್ನು 23 ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.
ನಿವಾಸಿಗಳಿಂದ ಪ್ರತಿಭಟನೆ
ಹಾಶ್ಮೀಯಾ ಮಸೀದಿ ಸುತ್ತಮುತ್ತಲಿನ ಪ್ರದೇಶವು ವಕ್ಫ್ ಮಂಡಳಿ ವ್ಯಾಪ್ತಿಗೆ ಸೇರಿದ್ದು, ಇಲ್ಲಿನ ನಿವಾಸಿಗಳು ಜಾಗವನ್ನು
ಖಾಲಿ ಮಾಡುವಂತೆ ನೋಟೀಸ್ ನೀಡಿದ್ದಾರೆ, ಆದರೆ ಸುಮಾರು 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು ಇದೀಗ ಏಕಾಏಕಿ ತೆರವಿಗೆ ಮುಂದಾಗಿದ್ದು, ಬದಲಿ ವ್ಯವಸ್ಥೆ ಮಾಡಿಕೊಡಬೇಕು, ತೆರವಿಗೆ ಕಾಲವಕಾಶ ಮಾಡಿ ಕೊಡಬೇಕು ಎಂದು ಮಸೀದಿ ಸುತ್ತಮುತ್ತಲಿನ ನಿವಾಸಿಗಳು ಕೆಲ ಕಾಲ ಪ್ರತಿಭಟನೆ ನಡೆಸಿದರು. ಆದರೆ ಕೋರ್ಟ್ ಆದೇಶ ಇರುವುದರಿಂದ ಪೊಲೀಸರು ಪ್ರತಿಭಟನೆಕಾರರನ್ನು ಚದುರಿಸಿದರು.
ತಡೆಯಾಜ್ಞೆ ಡ್ರಾಮಾ
ಹಾಶ್ಮೀಯಾ ಮಸೀದಿ ಸುತ್ತಮುತ್ತಲಿನ ಪ್ರದೇಶವು ವಕ್ಫ್ ಮಂಡಳಿ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದ ವಕ್ಪ್ ಬೋರ್ಡ್ ಕ್ರಮಕ್ಕೆ ಕಲಬುರಗಿ ಕರ್ನಾಟಕ ವಕ್ಫ್ ಟ್ರಿಬ್ಯುನಲ್ ತಡೆಯಾಜ್ಞೆ ನೀಡಿದೆ. ವಕ್ಪ್‌ಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ಮನೆ ಹಾಗೂ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿಕೊಂಡಿರುವದ ಕುರಿತು ತೆರವು ಕಾರ್ಯಚರಣೆ ನಿಲ್ಲಿಸಬೇಕು. ಸಂತ್ರಸ್ಥರು ಬಾಡಿಗೆ ಹಣ ಪಾವತಿಸುವದಾಗಿ ಹೇಳಿದ್ದರಿಂದ ಮೇ.27 ವರೆಗೆ ಬಾಡಿಗೆ ಪಾವತಿಸುವ ಅವಕಾಶ ನೀಡಲಾಗಿದೆ. ಬಾಡಿಗೆ ಕಟ್ಟುವಲ್ಲಿ ವಿಫಲವಾದಲ್ಲಿ ನ್ಯಾಯಾಧೀಶಕರಣ ಆದೇಶ ರದ್ದುಗೊಳ್ಳಲಿದೆ ಎಂದು ತಡೆಯಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆಂದು ನಿವಾಸಿಗಳು ಕೆಲಕಾಲ ತೆರವು ಕಾರ್ಯಚರಣೆ ನಿಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಆದರೆ ಅಧಿಕಾರಿಗಳು ನಮಗೆ ಕೋರ್ಟ್‌ನಿಂದ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲವೆಂದು ತೆರವು ಕಾರ್ಯಚರಣೆ ಮುಂದುವರೆಸಿದರು.
ಹಾಷ್ಮೀಯಾ ಮಸೀದಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಲು ಕೋರ್ಟ್ ಆದೇಶ ನೀಡಿದ ಹಿನ್ನಲೆಯಲ್ಲಿ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಲಾಗುತ್ತಿದೆ. ಕೆಲವರು ಬಂದು ಕೋರ್ಟ್‌ನಿಂದ ತಡೆಯಾಜ್ಞೆ ಬಂದಿದೆಂದು ಹೇಳಿದರು. ಆದರೆ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಆದರಿಂದ ತೆರವು ಕಾರ್ಯ ನಿಲ್ಲುವುದಿಲ್ಲ. ಗಜಾನನ ಬಾಳೆ ಎಸಿ ರಾಯಚೂರು