ಯಲಹಂಕ ವಲಯದಲ್ಲಿ ಅನಧಿಕೃತ ಕಟ್ಟಡಗಳ ವ್ಯತಿರಿಕ್ತ ಭಾಗ ತೆರವು

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದ ವಿವಿಧೆಡೆ ಅನಧಿಕೃತವಾಗಿ ನಿರ್ಮಿಸಿರುವ 7 ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವು ಕಾರ್ಯಾಚರಣೆ ನಡೆಸಲಾಗಿದೆ.

ವಲಯ ಆಯುಕ್ತ ಕರೀಗೌಡ ಹಾಗೂ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ನೇತೃತ್ವದಲ್ಲಿ ಮಂಗಳವಾರ ನಿಯಮಬಾಹಿರವಾಗಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲಾಯಿತು. ಈ ವೇಳೆ ಕಟ್ಟಡಗಳ ಮಾಲೀಕರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕೋಗಿಲು ವಾರ್ಡ್ ಮಿಟಗಾನಹಳ್ಳಿ ವೃತ್ತದ ಬಳಿಯ ಸೈಟ್ ಸಂಖ್ಯೆ 3ರಲ್ಲಿ ನಿಯಮ ಮೀರಿ ಹೆಚ್ಚುವರಿ ನಿರ್ಮಾಣ ಮಾಡಲಾಗಿತ್ತು. ಇದೇ ರೀತಿ ದೊಡ್ಡಬೊಮ್ಮಸಂದ್ರ, ಭದ್ರಪ್ಪ ಬಡಾವಣೆಯ ಮಾರುತಿನಗರ, ಎನ್‌ಟಿಐ ಬಡಾವಣೆಯ ಹಂತ - 2, ಅರ್ಕಾವತಿ ಬಡಾವಣೆಯ 14ನೇ ಬ್ಲಾಕ್ ಹಾಗೂ 10ನೇ ಬ್ಲಾಕ್, ಜುಡಿಷಿಯಲ್ ಲೇಔಟ್‌ನಲ್ಲಿ ನಿರ್ಮಿಸುತ್ತಿರುವ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಚರಣೆಯಲ್ಲಿ ಯಲಯಂಕ ವಲಯದ ಮುಖ್ಯ ಅಭಿಯಂತರ ರಂಗನಾಥ್, ನಗರ ಯೋಜನೆಯ ಜಂಟಿ ನಿರ್ದೇಶಕ ನಾಗರಾಜಪ್ಪ, ನಗರ ಯೋಜನೆಯ ಸಹಾಯಕ ನಿರ್ದೇಶಕರು, ಎಇಇ ಹಾಜರಿದ್ದರು.

50 ಅನಧಿಕೃತ ಕಟ್ಟಡಗಳ ತೆರವಿಗೆ ಗುರಿ:

ಯಲಹಂಕ ವಲಯ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅದರಂತೆ ಸದ್ಯ 7 ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಿದ್ದು, ಈ ವಾರದಲ್ಲಿ ಇನ್ನೂ 50 ಕಟ್ಟಡಗಳಲ್ಲಿ ತೆರವು ಕಾರ್ಯಾಚರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ವಲಯ ಆಯುಕ್ತ ಕರೀಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net