ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳ ತೆರವು

SRP_08-01jpj
ಪಟ್ಟಣ ಹೊರವಲಯದ ಚಂದ್ರವನದ ಬಂಗಾರದೊಡ್ಡಿ ಅಣೆಕಟ್ಟು ಹಾಗೂ ಕಾವೇರಿ ನದಿ ತೀರದ ಖರಾಬು ಸೇರಿದಂತೆ ಸಂರಕ್ಷಿತ ಸ್ಥಳವನ್ನು ಒತ್ತುವರಿ ಮಾಡಿ ಅತಿಕ್ರಮಿಸಿ ನಿರ್ಮಿಸಲಾಗಿದ್ದ ರೆಸಾರ್ಟ್‌ನ ಅಕ್ರಮ ಕಟ್ಟಡಗಳ ತೆರವು ಕಾರ್ಯಚರಣೆ ನಡೆಸಲಾಯಿತು. ತಹಸೀಲ್ದಾರ್ ಚೇತನಾ ಯಾದವ್, ಪುರಸಭೆ ಮುಖ್ಯಾಧಿಕಾರಿ ಸತೀಶ್, ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್ ಇದ್ದರು.
Published on

ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಬಂಗಾರದೊಡ್ಟಿ ಅಣೆಕಟ್ಟೆ ಸಮೀಪ ತಲೆ ಎತ್ತುತ್ತಿದ್ದ ಅಕ್ರಮ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ಕಟ್ಟಡಗಳನ್ನು ಕಾವೇರಿ ನೀರಾವರಿ ನಿಗಮ ಹಾಗೂ ತಾಲೂಕು ಆಡಳಿತ ಜಂಟಿ ತೆರವು ಕಾರ್ಯಚರಣೆ ನಡೆಸಿ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಪಟ್ಟಣದ ಚಂದ್ರವನ ಸ್ಥಳದ ಬಂಗಾರದೊಡ್ಡಿ ನಾಲೆ ಸಮೀಪ ಹಾಗೂ ಕಾವೇರಿ ನದಿಗೆ ಹೊಂದಿಕೊಂಡಂತಿದ್ದ ಕೃಷಿ ಹಿಡುವಳಿ ಭೂಮಿ ಸೇರಿದಂತೆ ಸಂರಕ್ಷಿತ(ಬಫರ್ ಜೋನ್) ಸ್ಥಳದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಿರ್ಮಾಣ ಮಾಡಿದ್ದ ಅಕ್ರಮ ಕಟ್ಟಡಗಳು ಹಾಗೂ ಅಳವಡಿಸಿದ್ದ ಕಬ್ಬಿಣದ ತಡೆಗೋಡೆ ಸಾಮಗ್ರಿಯನ್ನು ಬುಧವಾರ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಇಇ ಜಯಂತ್, ತಹಸೀಲ್ದಾರ್ ಚೇತನಾ ಯಾದವ್, ಪುರಸಭಾ ಮುಖ್ಯಾಧಿಕಾರಿ ಸತೀಶ್ ಹಾಗೂ ಡಿವೈಎಸ್ಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಮೂರ‌್ನಾಲ್ಕು ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮಗೊಳಿಸುವ ಜತೆಗೆ ಕಲ್ಲು-ಮಣ್ಣಿಂದ ತುಂಬಿ ಮುಚ್ಚಿದ್ದ ನದಿಯೊಳಗಿನ ಒತ್ತುವರಿಯನ್ನು ತೆರವು ಮಾಡಿದರು. ನದಿಯ ಖರಾಬು ಸ್ಥಳವನ್ನು ಅಳತೆ ಹಾಗೂ ಮಹಜರು ಮಾಡಿದ ಕಂದಾಯ ಇಲಾಖೆ ಸಿಬ್ಬಂದಿ ಹದ್ದುಬಸ್ತು ನಿಗದಿಗೊಳಿಸಿದರು.

ಪ್ರಭಾವಿಗಳ ಒತ್ತಡ : ತಾಲೂಕು ಆಡಳಿತ, ನೀರಾವರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಕೈಗೊಂಡ ಜಂಟಿ ಕಾರ್ಯಾಚರಣೆಗೆ ತಡೆಯೊಡ್ಡುವಂತೆ ಒತ್ತುವರಿದಾರರು ಪ್ರಭಾವಿಗಳಿಂದ ಒತ್ತಡ ಏರುವ ತಂತ್ರ ಅನುಸರಿಸಿದರು. ಇದರಿಂದ ತಾಲೂಕು ಆಡಳಿತ ಮೊದಲು ಕ್ಷಿಪ್ರವಾಗಿ ಕೈಗೊಂಡ ಕಾರ್ಯಚರಣೆ ತದನಂತರ ನಿಧಾನಗೊಂಡಿತು. ಅಕ್ರಮ ರೆಸಾರ್ಟ್ ಮಾಲೀಕರೇ ತಂದ ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದು ಅಕ್ರಮ ಒತ್ತುವರಿಗೆ ಬಳಸಲಾಗಿದ್ದ ಕಟ್ಟಡ ಬಿಟ್ಟು ನೆಲಹಾಸು, ಕಬ್ಬಿಣದ ಕಂಬಗಳು, ವಿದ್ಯುತ್ ತಂತಿಗಳು ಸೇರಿದಂತೆ ಸಾಲುದೀಪಗಳನ್ನು ಬಹಳ ನಿಧಾನವಾಗಿ ಕಳಚಿಕೊಡುವ ಮೂಲಕ ಅವರಿಗೆ ಸಹಾಯ ಮಾಡಿದಂತೆ ಕಂಡುಬಂತು.

ನದಿ ಮೂಲ ಸ್ವರೂಪವನ್ನೇ ನಾಶ: ಕಾವೇರಿ ನೀರಾವರಿ ನಿಗಮದ(ಕೆಆರ್‌ಎಸ್ ವಿಭಾಗ) ಇಇ ಜಯಂತ್ ಮಾತನಾಡಿ, ಬಂಗಾರದೊಡ್ಡಿ ನಾಲೆ ಮತ್ತು ಕಾವೇರಿ ನದಿ ತೀರದಲ್ಲಿನ ಸಂರಕ್ಷಿತ ಪ್ರದೇಶವನ್ನು ಮಣ್ಣಿನಿಂದ ಮುಚ್ಚಿ ಒತ್ತುವರಿಯ ಜತೆಗೆ ಅಕ್ರಮ ಕಟ್ಟಡವನ್ನು ನಿರ್ಮಿಸಿ ಕಾವೇರಿ ನದಿಯ ಮೂಲ ಸ್ವರೂಪವನ್ನೇ ನಾಶ ಮಾಡುವ ಜತೆಗೆ ನದಿಯ ನೀರಿನ ಹರಿವಿನ ತಿರುವು ಬದಲಿಸಲಾಗಿತ್ತು. ಕೆಲ ತಿಂಗಳ ಹಿಂದೆ ಲೋಕಾಯುಕ್ತ ನ್ಯಾಯಾಮೂರ್ತಿಗಳು ಆಗಮಿಸಿ ಪರಿಶೀಲಿಸಿ ಸುಮೋಟೋ ಪ್ರಕರಣ ದಾಖಲಿಸುವ ಜತೆಗೆ ಕಾನೂನು ಪ್ರಕಾರ ನೋಟಿಸ್ ನೀಡಿ ತೆರವಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಸಂರಕ್ಷಿತ ವಲಯದಲ್ಲಿನ ಅಕ್ರಮ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಾಚರಣೆ ವೇಳೆ ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್, ಇನ್‌ಸ್ಪೆೆಕ್ಟರ್ ಬಿ.ಜಿ.ಕುಮಾರ್, ರಾಜಶ್ವ ನೀರಿಕ್ಷಕ ರೇವಣ್ಣ, ಸೆಸ್ಕ್ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವರದಿ ಫಲಶ್ರುತಿ : ಅಕ್ರಮದ ವಿರುದ್ಧ ಸತತವಾಗಿ ಬೆನ್ನುಬಿದ್ದ ವಿಜಯವಾಣಿ ಅಕ್ರಮ ಭೂ ಮಾಫಿಯಾ, ಕಾವೇರಿ ನದಿ ಒತ್ತುವರಿ ಹಾಗೂ ಅಕ್ರಮ ಉದ್ಯಮದ ಮೂಲಕ ಕೋಟ್ಯಂತರ ರೂ. ತೆರಿಗೆ ಪಾವತಿಗೆ ಕನ್ನ ಹಾಕಿರುವ ಕುರಿತು ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಸತತ ಮೂರ‌್ನಾಲ್ಕು ವರ್ಷಗಳಿಂದ ಬೆನ್ನುಬಿದ್ದ ಪರಿಣಾಮ ಸಾಕಷ್ಟು ಸಂಘಟನೆಗಳು ಜಾಗೃತಗೊಂಡು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಇಷ್ಟಾದರೂ ಕಾನೂನಿನ ನಿಯಮಕ್ಕೆ ಡೋಂಟ್ ಕೇರ್ ಎಂದಿದ್ದ ಅಕ್ರಮ ಎಸಗಿದವರ ವಿರುದ್ಧ ಕೆಲವರು ಲೋಕಾಯುಕ್ತ ಸಂಸ್ಥೆ ಹಾಗೂ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆಗೆ ಆದೇಶ ನೀಡಲಾಗಿತ್ತು. ಇಷ್ಟಾದರೂ ಗಾಢನಿದ್ರೆಯಲ್ಲಿದ್ದ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಜಯವಾಣಿ ಪತ್ರಿಕೆಯು ಅ.8ರಂದು ಶ್ರೀರಂಗಪಟ್ಟಣದಲ್ಲಿ ಅಕ್ರಮ ರೆಸಾರ್ಟ್ ಶಿರ್ಷಿಕೆಯಡಿ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತು ಬುಧವಾರ ತೆರವು ಕಾರ್ಯಾಚರಣೆಗೆ ನಾಂದಿ ಹಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net