

ಪುತ್ತೂರು ಗ್ರಾಮಾಂತರ : ಶತಮಾನ ಸಂಭ್ರಮ ಕಂಡಿರುವ ನರಿಮೊಗರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಬಳಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ಮತ್ತು ವಿದ್ಯುತ್ ಕಂಬವನ್ನು ತೆರವುಗೊಳಿಸುವ ಕಾರ್ಯ ಸಾಮಾಜಿಕ ಕಾರ್ಯಕರ್ತ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರೂ ಆದ ಪ್ರವೀಣ್ ಆಚಾರ್ಯ ಮುತುವರ್ಜಿಯಲ್ಲಿ ನಡೆದಿದೆ.
ನರಿಮೊಗರು ಸರ್ಕಾರಿ ಶಾಲಾ ಬಳಿಯಿದ್ದ ವಿದ್ಯುತ್ ಕಂಬ ಮತ್ತು ವಿದ್ಯುತ್ ಲೈನಿಗೆ ಅಲ್ಲಿದ್ದ ಮರವೊಂದರ ಕೊಂಬೆಗಳು ತಾಗಿಕೊಂಡಿದ್ದವು. ವಿದ್ಯುತ್ ಕಂಬದ ಬಳಿ ಇದ್ದ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಹರಡಿಕೊಂಡಿರುವುದರಿಂದ ಮಳೆಗಾಲದಲ್ಲಿ ಮರದ ಮೂಲಕ ವಿದ್ಯುತ್ ಪ್ರವಹಿಸಿ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿತ್ತು. ಮಕ್ಕಳ ಹಿತ ಕಾಯುವ ನಿಟ್ಟಿನಲ್ಲಿ ಈ ವಿಚಾರವನ್ನು ಶಾಲೆಯ ಮುಖ್ಯಶಿಕ್ಷಕಿ ಶ್ರೀಲತಾ ಅವರು ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಪ್ರವೀಣ್ ಆಚಾರ್ಯ ನರಿಮೊಗರು ಗಮನಕ್ಕೆ ತಂದಿದ್ದರು.
ಪ್ರವೀಣ್ ಆಚಾರ್ಯ ಶಾಸಕ ಅಶೋಕ್‌ಕುಮಾರ್ ರೈ ಅವರ ಗಮನಕ್ಕೆ ತಂದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ನರಿಮೊಗರು ಉಪವಲಯ ಅರಣ್ಯಾಧಿಕಾರಿ ರಾಜೇಂದ್ರ ಹಾಗೂ ಮುಂಡೂರು ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಮೆಸ್ಕಾಂ ಇಂಜಿನಿಯರ್ ರಮೇಶ್ ಅವರನ್ನು ಸಂಪರ್ಕಿಸಿ ಅಪಾಯಕಾರಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಶಾಸಕರ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರು ಮರ ಮತ್ತು ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಪ್ರವೀಣ್ ಆಚಾರ್ಯ ಅವರ ಕಾರ್ಯಕ್ಕೆ ಎಸ್‌ಡಿಎಂಸಿ ಹಾಗೂ ವಿದ್ಯಾರ್ಥಿಗಳ ಪಾಲಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.