ಪ್ರಾಣತ್ಯಾಗ ಮಾಡಿದವರ ಸ್ಮರಣೆ ಅವಶ್ಯ

BLY- 21-2
ಬಳ್ಳಾರಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್‌ಕುಮಾರ್ ಮಾತನಾಡಿದರು. ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಕೆ.ಪಿ.ರವಿಕುಮಾರ್ ಇತರರಿದ್ದರು.
Published on

ಬಳ್ಳಾರಿ : ಕರ್ತವ್ಯ ಮಾಡುತ್ತಲೇ ಪ್ರಾಣತ್ಯಾಗ ಮಾಡಿದ ಸಮವಸ್ತ್ರಧಾರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್‌ಕುಮಾರ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಮತ್ತು ರಾಜ್ಯಕ್ಕಾಗಿ ಕರ್ತವ್ಯ ಪಾಲನೆಯಲ್ಲಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸುತ್ತಾ, ಅವರ ಕುಟುಂಬವು ಧೈರ್ಯದಿಂದ ಸುಖಕರವಾಗಿರಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಪಡೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಸ್ವಾರ್ಥ ಸೇವೆಯಲ್ಲಿ ಕಳೆದು ಹೋದ ಜೀವಗಳನ್ನು ಸ್ಮರಿಸುತ್ತಾ, ನೋವು-ದುಃಖ ಅನುಭವಿಸಿದ ಅವರ ಕುಟುಂಬಗಳನ್ನು ಮರೆಯಬಾರದು ಎಂದರು.

ಪೊಲೀಸ್ ಪಡೆಗೆ ಬೆಂಬಲ ನೀಡುವ ಮೂಲಕ ಸಬಲೀಕರಣಗೊಳಿಸಬೇಕು. ಪೊಲೀಸ್ ಮತ್ತು ಸಮುದಾಯದ ನಡುವೆ ನಿಕಟ ಸಂಬಂಧ ಹೊಂದಿಕೊಂಡು, ಪರಸ್ಪರ ನಂಬಿಕೆಯ ಮೂಲಕ ಉತ್ತಮ ಮತ್ತು ಸುರಕ್ಷಿತ ನಾಳೆಗಾಗಿ ನಾವೆಲ್ಲರೂ ಸಹಕರಿಸೋಣ ಎಂದು ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, 1959 ರ ಅ.21ರಂದು ಸಿಆರ್‌ಪಿಎಫ್‌ನ ಡಿವೈಎಸ್‌‌ಪಿ ಕರಣ್‌ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಿಆರ್‌ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್‌ಸ್ಟ್ರಿಂಗ್ ಹತ್ತಿರ ಗಸ್ತು ನಡೆಸುತ್ತಿರುವಾಗ, ಚೀನಾದ ಸೈನಿಕರು ಸುಸಜ್ಜಿತ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೊಂದಿ, ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ಮಾಡಿದ್ದರು. ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೀನದಾದ ಸೈನಿಕರೊಂದಿಗೆ ಹೋರಾಡಿದರು. ಹೋರಾಟದಲ್ಲಿ 10 ಮಂದಿ ಸಿಆರ್‌ಪಿಎಫ್ ಜವಾನರು ವೀರ ಮರಣ ಹೊಂದಿದರು ಹಾಗೂ 9 ಮಂದಿಯನ್ನು ಚೀನಾದ ಸೈನಿಕರು ದಸ್ತಗಿರಿ ಮಾಡಿದ್ದರು ಎಂದು ಘಟನೆ ವಿವರಿಸಿದರು.

ಸಿಆರ್‌ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕ ನಿರ್ಮಿಸಲಾಗಿದೆ. ವೀರ ಮರಣವನ್ನಪ್ಪಿದ ಸಮವಸ್ತ್ರಧಾರಿ ಅಧಿಕಾರಿ ಮತ್ತು ಸಿಬ್ಬಂದಿ ನೆನಪು ಹಾಗೂ ಶಾಂತಿಗಾಗಿ ದೇಶಾದ್ಯಂತ ಅ.21ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

2022-23 ನೇ ಸಾಲಿನಲ್ಲಿ ದೇಶದಲ್ಲಿ ಒಟ್ಟು 189 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ರಾಜ್ಯದಲ್ಲಿ 16 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಬಾರಿ ಗುಂಡು ಹಾರಿಸುವ ಮೂಲಕ ಸಂತಾಪ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಎನ್.ಶಶಿಧರ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net