ಗುರು ಸ್ಮರಣೆಯೇ ಕಾರ್ಯಸಿದ್ದಿಯ ಶಕ್ತಿ

FotoJet (3)
Published on

ಪ್ರಾಂಶುಪಾಲ ಸಂತೋಷ್​ ಕುಮಾರ್​ ಹೇಳಿಕೆ

 ವೈ.ಎನ್​.ಹೊಸಕೋಟೆ: ಗುರುಗಳನ್ನು ಸ್ಮರಿಸಿ ಯಾವುದೇ ಕಾರ್ಯ ಮಾಡಿದರು ಅದು ಸಿದ್ದಿಸುತ್ತದೆ ಎಂದು ಪ್ರಾಂಶುಪಾಲ ಸಂತೋಷ್​ ಕುಮಾರ್​ ತಿಳಿಸಿದರು.

ದೊಡ್ಡಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2015ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ತೀಡಿ ತಿದ್ದಲು ಗುರುಗಳು ಶ್ರಮ ಪಡುತ್ತಾರೆ. ವಿದ್ಯಾರ್ಥಿಗಳು ಕಲಿತು ಪ್ರಯೋಜಕರಾದಾಗ ಅವರ ಶ್ರಮದ ಫಲ ದೊರೆಯುತ್ತದೆ. ತಾಯಿ&ತಂದೆ ಮತ್ತು ಗುರುವಿಗೆ ವಿದೇಯರಾಗಿರುವವರಿಗೆ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ ಎಂದರು.

ಶಿಕ್ಷಕ ಸೋಮಶೇಖರ್​ ಮಾತನಾಡಿ, ಹಿಂದಿನ ಬ್ಯಾಚ್​ಗಳ ವಿದ್ಯಾರ್ಥಿಗಳ ಕಲಿಕೆಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಾ, ಅವರಲ್ಲಿ ವಿದ್ಯೆಯ ಜತೆಗೆ ಸಂಸ್ಕಾರ ಗಟ್ಟಿಗೊಳಿಸುತ್ತಿದ್ದೆವು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ, ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಅಂದು ಸೌಲಭ್ಯಗಳ ಕೊರತೆ ಇತ್ತು, ಇಂದು ಆಧುನಿಕ ಸೌಲಭ್ಯಗಳಿವೆ. ಅವುಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಶಿಕ್ಷಕ ನಾಗರಾಜು ಮಾತನಾಡಿ, ಜನ್ಮ ನೀಡಿದ ತಾಯಿ, ಪಾಲನೆ ಮಾಡಿದ ತಂದೆ ವಿದ್ಯೆ ತಿಳಿಸಿಕೊಟ್ಟ ಗುರು ಇವರ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲು ಪ್ರತಿಯೊಬ್ಬರು ಪ್ರಯೋಜಕರಾಗಬೇಕು ಮತ್ತು ದೀಪದಿಂದ ದೀಪ ಹಚ್ಚುವ ರೀತಿಯಲ್ಲಿ ತಾವು ಕಲಿತ ವಿದ್ಯೆ ಮತ್ತು ಸಂಸ್ಕಾರವನ್ನು ಮತ್ತೊಬ್ಬರಿಗೆ ಕಲಿಸಬೇಕು ಎಂದರು.

2015ನೇ ಸಾಲಿನ ತಂಡದ ಶಿಕ್ಷಕರಾದ ಸಿ.ಪರಮೇಶ, ಶಿವಕುಮಾರ್​, ವೇಣುಗೋಪಾಲ್​, ಎಚ್​.ಜಯಶ್ರೀ, ನಾಗಮಣಿ, ಪಿ.ಎನ್​.ಗೀತಾ ಅವರಿಗೆ ಗುರುವಂದನೆ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net