

ಕಾಸರಗೋಡು: ಗಡಿನಾಡು ಕಾಸರಗೋಡು ಹಲವಾರು ಸಾಧಕರಿಂದಾಗಿ ಬೆಳಗಿ ಬಂದ ನಾಡು. ಅಂತಹ ಸಾಧಕರಲ್ಲಿ ದೇಶಮಂಗಲ ಕೃಷ್ಣ ಕಾರಂತರು ಒಬ್ಬರು. ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆ-ಸಂಸ್ಮರಣಾ ಕಾರ್ಯಕ್ರಮದಲ್ಲಿ ಹಿಂದಿನ ಸಾಧಕರ ಸಾಧನೆಯ ಕುರಿತಾಗಿ ಇಂದಿನ ಪೀಳಿಗೆಗೆ ಮನದಟ್ಟು ಮಾಡುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಶ್ರೇಷ್ಠವಾದದ್ದು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹೇಳಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ದೇಶಮಂಗಲ ದಿ.ಕೃಷ್ಣ ಕಾರಂತರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅನುಗ್ರಹ ನುಡಿಗಳನ್ನಾಡಿದರು.
ನಾರಾಯಣ ರಂಗಾಭಟ್ಟ ಮಧೂರು ಕಾರ್ಯಕ್ರಮ ಉದ್ಘಾಟಿಸಿದರು. ದೇಶಮಂಗಲ ಕೃಷ್ಣ ಕಾರಂತರು ನಡೆದು ಬಂದ ದಾರಿ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು, ಅವರ ಬರಹಗಳ ವಿಶೇಷತೆಗಳ ಬಗ್ಗೆ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಸಂಸ್ಕರಣಾ ಭಾಷಣಗೈದರು. ಹಿರಿಯ ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಅವರನ್ನು ಗೌರವಿಸಲಾಯಿತು. ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈದರು.
ಕೋಲಾರ ದಕ್ಷಿಣ ಕನ್ನಡ ಯಕ್ಷಗಾನ ಕಲಾ ವೃಂದ, ಕೋಲಾರ ಚಿನ್ನದ ಗಣಿ ಪ್ರದೇಶ ಇವರು ಉಪಯೋಗಿಸುತ್ತಿದ್ದ ಇನ್ನೂರು ವರ್ಷಗಳ ಹಿಂದಿನ ತೆಂಕುತಿಟ್ಟು ಯಕ್ಷಗಾನದ ಎರಡು ಕಿರೀಟಗಳನ್ನು ಸುಜೀರ್ ಸುಬ್ರಾಯ ಸುರತ್ಕಲ್ ಪ್ರತಿಷ್ಠಾನದ ಮ್ಯೂಸಿಯಂಗೆ ಹಸ್ತಾಂತರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಶಾಲೆ ನಿವೃತ್ತ ಮುಖ್ಯಶಿಕ್ಷಕ ಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಫಣಿಗಿರಿ ಪ್ರತಿಷ್ಠಾನ ಬೈಂದೂರು ಅಧ್ಯಕ್ಷ ಉಮೇಶ ಶಿರೂರು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರೊ.ಎ. ಶ್ರೀನಾಥ್ ಕಾಸರಗೋಡು, ವಾಸುದೇವ ಕಾರಂತ ಉಜಿರೆಕೆರೆ ಉಪಸ್ಥಿತರಿದ್ದರು. ಪಿ.ಎಚ್.ಡಿ. ಪದವಿ ಪಡೆದ ಕೃಷ್ಣ ಶುಭಲಕ್ಷ್ಮೀ ಮಹೇಶ ಮಯ್ಯ ಇವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿ, ಜಗದೀಶ ಕೆ. ಕೂಡ್ಲು ವಂದಿಸಿದರು. ಪ್ರಸನ್ನ ಕಾರಂತ ದೇಶಮಂಗಲ ನಿರೂಪಿಸಿದರು.
ಹರಿದಾಸ ಶೇಣಿ ಪರಂಪರೆಯನ್ನು ಮುಂದುವರಿಸುತ್ತಿರುವ ಬಾಲಮುರಳಿ ಶೇಣಿ ಇವರಿಂದ ಹರಿಕಥಾ ಕಾಲಕ್ಷೇಪ, ಪ್ರಸಿದ್ಧ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ಹಿಮ್ಮೇಳದಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶಶಿ ಆಚಾರ್ಯ ಭಾಗವಹಿಸಿದ್ದರು. ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ಕಲ್ಚಾರ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸರ್ಪಂಗಳ ಈಶ್ವರ ಭಟ್, ವೈಕುಂಠ ಹೇರ್ಳೆ ಪಾತ್ರ ನಿರ್ವಹಿಸಿದರು.