ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಕೋಟೆ ಜನ

CTD 18 Shivarathri 1--08
Published on

ಚಿತ್ರದುರ್ಗ: ಶಿವನಾಮ ಸ್ಮರಣೆಯೊಂದಿಗೆ ನಗರ ಸೇರಿ ಜಿಲ್ಲೆಯ ಹಲವು ಮಂದಿರ ಹಾಗೂ ಮನೆಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಭಕ್ತರು ಆಚರಿಸಿದರು.

ಶಿವನ ದೇಗುಲಗಳು ಸೇರಿ ಇತರೆಡೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇವೆಗಳು ಮುಂಜಾನೆಯಿಂದಲೇ ನೆರವೇರಿದವು.

ಮನೆಗಳು ತಳಿರು-ತೋರಣಗಳಿಂದ ಸಿಂಗಾರಗೊಂಡಿದ್ದವು. ಮನೆ ಅಂಗಳದಲ್ಲಿ ರಂಗೋಲಿಗಳು ಗಮನಸೆಳೆದವು. ಸಂಜೆ ಆಗುತ್ತಿದ್ದಂತೆ ದೇವಸ್ಥಾನದತ್ತ ಹೆಜ್ಜೆ ಹಾಕುವ ಜನರ ಸಂಖ್ಯೆ ಹೆಚ್ಚಾಗಿತ್ತು.

ತಡರಾತ್ರಿ ಕೋಟೆಯನ್ನೇರಿದ ಸಾವಿರಾರು ಮಂದಿ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಏಕನಾಥೇಶ್ವರಿ, ಬೆಟ್ಟದ ಗಣಪತಿ ದರ್ಶನ ಪಡೆದರು. ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ರಾತ್ರಿ ಇಡೀ ಭಜನೆ ನಡೆಯಿತು.

ಆನೆಬಾಗಿಲು ಸಮೀಪದ ಪಾತಾಳ ಲಿಂಗೇಶ್ವರ, ವಾಸವಿ ಮಹಲ್‌ನ ಕನ್ಯಾಕಪರಮೇಶ್ವರಿ ದೇಗುಲದಲ್ಲಿನ ನಗರೇಶ್ವರ, ಜೋಗಿಮಟ್ಟಿ ರಸ್ತೆಯ ಕೂಡಲಿ ಶೃಂಗೇರಿ ಮಠದಲ್ಲಿನ ಚಂದ್ರಮೌಳೇಶ್ವರ ಸ್ವಾಮಿಗೆ ನಾಲ್ಕು ಯಾಮಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ 9.30ರವರೆಗೂ ಸಾಮೂಹಿಕ ರುದ್ರಾಭಿಷೇಕ ನಡೆಯಿತು. ಕೋಟೆ ರಸ್ತೆಯ ಗಾರೆಬಾಗಿಲು ಈಶ್ವರ, ಕರಿವರ್ತಿ ಈಶ್ವರ, ಕೆಳಗೋಟೆಯ ಬೇಡರ ಕಣ್ಣಪ್ಪ, ಗಾರೆಹಟ್ಟಿಯ ಮಹಾಬಲೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನಸ್ವಾಮಿ, ಉಜ್ಜಿನಮಠದ ರಸ್ತೆಯ ಉಮಾ ಮಹೇಶ್ವರ, ಕಾಶಿ ವಿಶ್ವೇಶ್ವರ, ಭೈರವೇಶ್ವರ, ವೀರಭದ್ರೇಶ್ವರ ಸೇರಿ ಹಲವು ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ಕಾಳಿಕಮಠೇಶ್ವರಿ, ಗೌರಸಂದ್ರ ಮಾರಮ್ಮ ದೇಗುಲಗಳಿಗೂ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net