ಸಂತರ ನಾಮ ಸ್ಮರಣೆಯಿಂದ ಅನುಗ್ರಹ ಪ್ರಾಪ್ತಿ

nrp church
ಎನ್.ಆರ್.ಪುರ ತಾಲೂಕು ಕರಗುಂದದ ಸೆಂಟ್ ಜಾರ್ಜ್ ಅರ್ಥೋಡೆಕ್ಸ್ ಸಿರಿಯಲ್ ಚರ್ಚ್‌ನಲ್ಲಿ ಸಂತ ಜಾರ್ಜ್ ವಾರ್ಷಿಕ ಹಬ್ಬದ ದಿವ್ಯ ಬಲಿ ಪೂಜೆ ಹಾಗೂ ಸಂದೇಶ ಕಾರ್ಯಕ್ರಮ ನಡೆಯಿತು. ಫಾ.ಬೇಹನ್ನಾನ್ ಕೋರೋತ್, ಫಾ. ಬೆನ್ನಿ ಮ್ಯಾಥ್ಯೂ, ಫಾ.ಜೋಸೆಫ್ ಚಾಕ್ಯೂ ಇತರರಿದ್ದರು.
Published on

ಎನ್.ಆರ್.ಪುರ: ಸಂತರ ನಾಮ ಸ್ಮರಣೆ ಮಾಡುವುದರಿಂದ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಕೇರಳದ ಸಾಸ್ತಾನ ಕೊಟ್ಟದ ಫಾ.ಬೇಹನ್ನಾನ್ ಕೋರೋತ್ ತಿಳಿಸಿದರು.

ಗುರುವಾರ ಕರಗುಂದದ ಸೆಂಟ್ ಜಾರ್ಜ್ ಅರ್ಥೋಡೆಕ್ಸ್ ಸಿರಿಯಲ್ ಚರ್ಚ್‌ನಲ್ಲಿ ನಡೆದ ಸಂತ ಜಾರ್ಜ್ ವಾರ್ಷಿಕ ಹಬ್ಬದ ದಿವ್ಯ ಬಲಿ ಪೂಜೆ ಹಾಗೂ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಸಂತ ಜಾರ್ಜ್ ಅವರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಅವರು ಯೇಸು ಕ್ರಿಸ್ತರಲ್ಲಿ ಅಚಲ ಭಕ್ತಿ ಹೊಂದಿದ್ದರು. ವೃತ್ತಿಗೆ ವಿದಾಯ ಹೇಳಿ ದೇವರಿಗಾಗಿ ಬಲಿದಾನ ಅರ್ಪಿಸಿಕೊಂಡ ಶ್ರೇಷ್ಠ ಸಂತ. ಅವರ ಮಧ್ಯಸ್ತಿಕೆಯಲ್ಲಿ ಪ್ರಾರ್ಥನೆ ಮಾಡಿದರೆ ಅಥವಾ ಅಪೇಕ್ಷಿಸಿದರೆ ಎಲ್ಲ ಕಾರ್ಯಗಳೂ ಯಶಸ್ವಿಯಾಗಲಿವೆ. ಇದರಿಂದ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಹೇಳಿದರು.
ನಮ್ಮ ಪೂರ್ವಿಕರು ಮತ್ತು ಎಲ್ಲ ಸಂತರ ದಾರಿಯಲ್ಲಿಯೇ ನಾವು ನಡೆದು ಉತ್ತಮ ಜೀವನ ನಡೆಸಬೇಕು. ಎಲ್ಲರನ್ನೂ ಗೌರವಿಸುವುದನ್ನು ಕಲಿಯಬೇಕು. ಎಲ್ಲ ಮತ, ಧರ್ಮದವರನ್ನು ಪ್ರೀತಿಯಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಹಬ್ಬದಲ್ಲಿ ಎಲ್ಲ ಧರ್ಮದ ಭಕ್ತರು ಭಾಗವಹಿಸುವುದರ ಮೂಲಕ ಸರ್ವ ಧರ್ಮದ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಾಗಿದೆ. ಇದೇ ರೀತಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದರು.
ಹಬ್ಬದ ಕಾರ್ಯಕ್ರಮವನ್ನು ಜಾರ್ಜ್ ನಾಳೆಯಲ್ ಕುಟುಂಬ ಮತ್ತು ಯೋಹನ್ ಪಾರಾಟು ಕುಡಿ ಕುಟುಂಬದವರು ನಡೆಸಿಕೊಟ್ಟರು. ಹಬ್ಬದ ಪ್ರಯುಕ್ತ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಿತು.
ಹಬ್ಬದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಚರ್ಚ್‌ನ ಭಕ್ತರು, ಹಿಂದು ಹಾಗೂ ಮುಸ್ಲಿಂ ಸಹೋದರರು, ಫಾ. ಬೆನ್ನಿ ಮ್ಯಾಥ್ಯೂ, ಫಾ.ಜೋಸೆಫ್ ಚಾಕ್ಯೂ, ಫಾ.ಪೌಲ್ ಕೆ.ಬೆನ್ನಿ, ಫಾ.ಥೋಮಸ್ ಮ್ಯಾಥ್ಯೂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net