ಶ್ರಾವಣದಲಿ ಮಹಾತ್ಮರ ಸ್ಮರಣೆ ಅಗತ್ಯ

shravana
Published on

ಮುಂಡರಗಿ: ಮಹಾತ್ಮರನ್ನು ಸದಾಕಾಲ ಸ್ಮರಿಸಬೇಕು. ಶ್ರಾವಣದಲ್ಲಿ ಮಹಾತ್ಮರ, ಶರಣರ ನುಡಿಗಳನ್ನು ಕೇಳಬೇಕು. ಶರಣರ ನುಡಿ ಕೇಳುವುದು ಮತ್ತು ಶಿವಶರಣರ ದರ್ಶನಾಶೀರ್ವಾದ ಪಡೆಯುವುದೇ ಶೃಂಗಾರ. ಪ್ರವಚನ, ಧರ್ಮ ಬೋಧನೆಗಳು ನಿರಂತರವಾಗಿ ನಡೆದರೆ ಮಾನವ ಜೀವನದಲ್ಲಿ ಹೊಸ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಪರ್ಯಾಂತ ಆಯೋಜಿಸಿರುವ ಕವಿರತ್ನ ಚನ್ನಕವಿ ರಚಿತ ಶ್ರೀನಲವತ್ವಾಡದ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಶ್ರೀಮಠದಿಂದ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ. ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಇಂಜಿನಿಯರ್ ಅನಿಲ ಅಂಗಡಿ ಅವರು ನೂತನ ಸಂಸತ್ ಭವನ ನಿರ್ಮಾಣ ಕೆಲಸದಲ್ಲಿ ಭಾಗಿಯಾಗಿದ್ದು ಹೆಮ್ಮೆಯ ವಿಷಯ. ಅನೇಕರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.

ಲಿಂಗನಾಯಕನಹಳ್ಳಿ ಶ್ರೀಚನ್ನವೀರ ಸ್ವಾಮೀಜಿ ಮಾತನಾಡಿ, ಪುರಾಣ ಪ್ರವಚನ ಶ್ರವಣ ಮಾಡುವುದರಿಂದ ಅಜ್ಞಾನ ದೂರವಾಗಿ ಸುಜ್ಞಾನದ ಅರಿವು ಮೂಡುತ್ತದೆ. ಸತ್ಯವಂತರ ಸಂಗದಿಂದ ಪರಮ ಸುಖ ದೊರೆಯುತ್ತದೆ. ಸಂಘವು ಸತ್ಸಂಗವಾಗಿರಬೇಕು. ಯುವಕರು ದೇಶಭಕ್ತಿಯನ್ನು ಹೊಂದಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಕಲಿಸಬೇಕು. ಮಕ್ಕಳನ್ನು ದೇಶ ಸೇವೆ, ಸಮಾಜ ಸೇವೆಗಾಗಿ ಅಣಿಗೊಳಿಸಬೇಕು ಎಂದರು.

ಪ್ರವಚನಕಾರ ಪಂಡಿತ ವಿರೂಪಾಕ್ಷ ಶಾಸ್ತ್ರಿಗಳು ಮಾತನಾಡಿ, ಮನುಷ್ಯ ಅರಿವಿನ ಜ್ಞಾನ ಅರಿತು ಬಾಳಬೇಕು. ಅರಿವು ಇದ್ದವನು ಮಹಾತ್ಮನಾಗಲು ಸಾಧ್ಯ. ನಲವತ್ವಾಡದ ವೀರೇಶ್ವರ ಶರಣರ ವಿಚಾರ ಚಿಂತನೆ ತಿಳಿದರೆ ಬದುಕು ಚೈತನ್ಯ, ಪಾವನ ಆಗಲಿದೆ ಎಂದು ಹೇಳಿದರು.

ನೂತನ ಸಂಸತ್ ಭವನ ನಿರ್ಮಾಣದಲ್ಲಿ ಭಾಗಿಯಾಗಿದ್ದ ಇಂಜಿನಿಯರ್ ಅನಿಲ ಅಂಗಡಿ ಅವರಿಗೆ ಶ್ರೀಗಳು ಗುರುರಕ್ಷೆ ನೀಡಿ ಗೌರವಿಸಿದರು. ಅನಿಲ ಕುಟುಂಬದವರು ಹಾಗೂ ಬಾಗೇವಾಡಿ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ ಅವರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಪ್ರಸಾದ ಸೇವೆ ವಹಿಸಿಕೊಂಡಿದ್ದ ವೀರಯ್ಯ ಕಾಗನೂರಮಠ, ಬಸವಂತಪ್ಪ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಸೋಮನಾಥ ಗವಾಯಿಗಳು ಹಾಗೂ ನಾಗಭೂಷಣ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು.

ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಕುಮಾರ ಬನ್ನಿಕೊಪ್ಪ, ಉಪಾಧ್ಯಕ್ಷ ರಂಗಪ್ಪ ಕೋಳಿ, ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಸಹ ಕಾರ್ಯದರ್ಶಿ ಪ್ರಶಾಂತ ಗುಡದಪ್ಪನವರ, ಖಜಾಂಚಿ ಮಂಜುನಾಥ ಶಿವಶೆಟ್ಟರ, ಮಂಜುನಾಥ ಮುಧೋಳ, ಅಶೋಕ ಅಂಗಡಿ ಇತರರು ಇದ್ದರು. ಶಿಕ್ಷಕ ಎಸ್.ಆರ್. ರಿತ್ತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net