

ವಿಜಯಪುರ : ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಬಿ.ಎಂ.ಕೋರೆ ಪ್ರತಿಷ್ಠಾನ, ಲೋಣಿ ಬಿಕೆ ವತಿಯಿಂದ ಸಿದ್ದೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಮಣ್ಣು ಉಳಿಸಿ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
50 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಭೀಮಾ ತೀರದ ಗಡಿಭಾಗದಲ್ಲಿ ಶಿಕ್ಷಣದ ಕಂಪು ಹಬ್ಬಿಸಿದ ಗುರುಗಳನ್ನು ಸನ್ಮಾನಿಸುತ್ತಿರುವುದು ಸಂತೋಷದ ವಿಷಯ. ಅಲ್ಲದೆ ಮಣ್ಣು ಉಳಿಸಿ ಅಭಿಯಾನದ ಸಂಚಾಲಕ ಮುತ್ತಣ ಬಿರಾದಾರ ಸೈಕಲ್ ಮೂಲಕ ಜ್ಞಾನ ಯೋಗಾಶ್ರಮದಿಂದ ದೆಹಲಿವರೆಗೆ ಜಾಥಾ ಮಾಡುತ್ತ ಮಣ್ಣಿನ ಬಗ್ಗೆ ತಿಳಿವಳಿಕೆ ನೀಡುತ್ತ ಪ್ರತಿ ದಿನ 40 ಕಿಲೋ ಮೀಟರ್ ಸಾಗುವುದು ಒಂದು ಸಾಹಸದ ಕೆಲಸ . ಚಿಕ್ಕ ವಯಸ್ಸಿನಲ್ಲಿ ದೊಡ್ಡ ಅಭಿಯಾನ ಹಿಮ್ಮಿಕೊಂಡಿರುವುದು ನಮ್ಮ ಜಿಲ್ಲೆಗೆ ಅಭಿಮಾನದ ಸಂಗತಿ ಎಂದರು.
ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಮಣ್ಣು ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ. ಮಣ್ಣು ಉಳಿದರೆ ಮಾತ್ರ ನಾವು ಮುಂದಿನ ದಿನಗಳಲ್ಲಿ ಬದುಕಲು ಸಾಧ್ಯ. ಎಲ್ಲರೂ ಮಣ್ಣು ಉಳಿಸಲು ಸಾವಯವ ಕೃಷಿ ಮಾಡುವತ್ತ ನಾಗರಿಕ ಸಮಾಜ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಸನ್ಮಾನಗೊಂಡ ಶಿಕ್ಷಕರ ಪರವಾಗಿ ಬಸವರಾಜ ಹಿಪ್ಪರಗಿ ಮಾತನಾಡಿ, ನಮ್ಮ ನಿವೃತ್ತಿ ನಂತರ ನಮ್ಮ ವಿದ್ಯಾರ್ಥಿ ಬಳಗ ಹಾಗೂ ಬಿ.ಎಂ. ಕೋರೆ ಪ್ರತಿಷ್ಠಾನ ಇಂದು ಸನ್ಮಾನಿಸಿದ್ದು ಎಲ್ಲ ಶಿಕ್ಷಕ ಬಳಗದ ವತಿಯಿಂದ ಅಭಿನಂದನೆಗಳು ಹೇಳುತ್ತೇನೆ ಎಂದರು.
ಡಾ.ಸಂಗಮೇಶ ಮೇತ್ರಿ ಮಾತನಾಡಿ, ನಾವು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರೇರಣೆ ದೊಡ್ಡದಿದೆ. ಯಾವುದೇ ಅಧಿಕಾರಿಗಳು ಅಧಿಕಾರವನ್ನು ತಲೆಗೆ ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ನಾವು ಸಮಾಜಮುಖಿಯಾಗಿ ಕಾರ್ಯಮಾಡಲು ಆಗುವುದಿಲ್ಲ ಎಂದರು.
ಉದ್ಯಮಿ ಸಿದ್ಧಾರಾಮ ಕಾಪಸೆ, ಡಿಡಿಪಿಯು ಶಾಂತಪ್ಪ ಬಗಲಿ, ಸಿಪಿಐ ರಮೇಶ ಅವಜಿ, ಖ್ಯಾತ ವೈದ್ಯ ಡಾ ಮಲ್ಲಿಕಾರ್ಜುನ ಉಟಗಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ ಶಿಕ್ಷಕರಾದ ಬಿ.ಎಸ್.ಹಿಪ್ಪರಗಿ, ವೈ.ಜಿ. ಗುಡ್ಡದ, ಶಿವಶಂಕರ ಬಗಲಿ ಹಾಗೂ ಸುಭಾಸ್ ಕಟಗೇರಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸಣ್ಣ ಕೋರೆ, ಶಶಿಧರ ಕಲ್ಯಾಣಶೆಟ್ಟಿ, ಸಿದ್ದಣ್ಣ ಸಾಹುಕಾರ ಬಿರಾದಾರ, ಸುರೇಶ ಗೊಣಸಗಿ, ಎಂ.ಆರ್.ಪಾಟೀಲ್ ಬಳ್ಳೊಳ್ಳಿ, ದಶರಥ ತಾವಸೆ, ಮಲ್ಲಿಕಾರ್ಜುನ ಆಕಳವಾಡಿ, ಎಂ.ಬಿ.ತೇಲಿ, ವಸಂತ ಶಾವರಿ, ಸಾಹೇಬಗೌಡ ಬಿರಾದಾರ, ಗಂಗಾಧರ ಸಂಬಣ್ಣಿ, ಹಣಮಂತ ಚಿಂಚಲಿ, ಜಗದೀಶ ಜಿತ್ತಿ, ಸುಭಾಸ ಕರಜಗಿ, ಗಜಾನಂದ ಮಂದಾಲಿ, ದೊಡ್ಡನಗೌಡ ಬಿರಾದಾರ, ಸಿ.ಎಂ.ಕೋರೆ, ಗುರುಪಾದ ಮೇತ್ರಿ, ಬಸವರಾಜ ಕುಂಬಾರ, ಸತ್ಯಣ್ಣ ಹಡಪದ, ಗುರುಶಾಂತ ಕಾಪಸೆ ಇದ್ದರು.