

ಶಿರಸಿ: ಮನುಷ್ಯನಿಗೆ ಉಂಟಾಗುವ ಮನಸ್ಸಿನ ತಲ್ಲಣಗಳನ್ನು ತಡೆಯಲು ದೇವರ ನಾಮಸ್ಮರಣೆ ಉತ್ತಮ ಉಪಾಯವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಚಾತುರ್ವಸ್ಯ ಅವಧಿಯಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಗುಂದ ಮತ್ತು ಛಾಪಖಂಡ ಭಾಗಿ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಪೂರ್ವಕ ಸ್ಮರಣೆಯಿಂದ ಸಿಗುವ ಮನಶಾಂತಿ ಬೇರೆ ಯಾವುದೇ ಮೂಲದಿಂದ ಸಿಗುವುದಿಲ್ಲ.
ನಿತ್ಯವೂ ಇಷ್ಟ ದೇವರ ಸ್ಮರಣೆ ಮಾಡುವುದನ್ನು ರೂಢಿ ಇಟ್ಟುಕೊಳ್ಳಬೇಕು.
ಇದರಿಂದ ಬೇಸರ, ಸಿಟ್ಟು, ಭಯ ಕಡಿಮೆ ಆಗುತ್ತವೆ. ಕೆಲವೊಮ್ಮೆ ತಲ್ಲಣಗಳು ಮನುಷ್ಯ ಮತಿ ಭ್ರಮಣೆಗೆ ಒಳಗಾಗುವಂತೆ ಕೂಡ ಮಾಡುತ್ತವೆ. ಇದನ್ನು ತಪ್ಪಿಸಲು ದೇವರ ಸ್ಮರಣೆ ಒಂದೇ ಅತ್ಯುತ್ತಮ ಸಾಧನ ಎಂದರು.
ಪ್ರತಿಯೊಬ್ಬರೂ ಸಂಧ್ಯಾ ಕಾಲದಲ್ಲಿ ದೇವರ ಸ್ಮರಣೆ ಮಾಡಬೇಕು. ಪ್ರತಿದಿನ ಬೆಳಗಿನ ವೇಳೆ ದೇವರ ಜಪ, ಪೂಜೆ, ಸ್ತೋತ್ರ ಪಾರಾಯಣ, ಸಹಸ್ರನಾಮ ಯೋಗಾಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಐಹಿಕವಾಗಿ ಆರೋಗ್ಯ ಚೆನ್ನಾಗಿದ್ದರೆ, ಮೋಕ್ಷ ಮಾರ್ಗಕ್ಕೆ ಹಾಗೂ ಪುಣ್ಯ ಸಂಪಾದನೆಗೆ ಸಹಕಾರಿ ಆಗಲಿದೆ ಎಂದರು.
ಭಗವಂತನ ಸ್ಮರಣೆ ಯಾಕೆ ಮಾಡಬೇಕು ಎಂಬುದನ್ನು ಭಗವಂತನೇ ಹೇಳುತ್ತಾನೆ. ಅನಿತ್ಯ, ಅಸುಖದಿಂದ ಕೂಡಿದ ಜೀವನ ಎದುರಿಸಲು ಭಕ್ತಿ ಬೇಕೇ ಬೇಕು. ಮನಸು ಎಷ್ಟು ವಿಚಿತ್ರ ಎಂದರೆ ನಾವು ನೋಡಿದ ಎಷ್ಟೋ ದುಃಖದ ಘಟನೆ ನಂತರ ಮರೆತು ಬಿಡುತ್ತೇವೆ.
ದೇವರು ಮರೆವು ನೀಡಿದ್ದು ಒಂದು ವರವೇ ಆದರೂ ಅದು ಅಜ್ಞಾನ. ಅನಿತ್ಯತೆ ಮರೆಯವುದೇ ಅಜ್ಞಾನ. ನನಗೂ ಮರಣವಿದೆ ಎಂಬುದನ್ನು ಮರೆಯದೇ ನೆನಪಿಟ್ಟುಕೊಳ್ಳಬೇಕು. ಆ ನೆನಪು ಇದ್ದಾಗ ನಮ್ಮ ನಡೆ ಬೇರೆಯಾಗುತ್ತದೆ. ಆಗ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬ ಉತ್ತೇಜನ ಬರುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು.
ಗುಂದ ಸೀಮಾ ಅಧ್ಯಕ್ಷ ದತ್ತಾತ್ರಯ ಹೆಗಡೆ ತಮ್ಮಣಗಿ, ಛಾಪಖಂಡ ಭಾಗಿ ಅಧ್ಯಕ್ಷ ಶಿವಾನಂದ ನಾರಾಯಣ ಭಟ್ಟ, ರಾಮಕೃಷ್ಣ ಭಟ್ಟ ನಗರಿ, ದಿವಾಕರ ದೇಸಾಯಿ ಶೇವಾಳ್ಳಿ ಇತರರು ಇದ್ದರು. ಮಾತೆಯರು ಕುಂಕುಮಾರ್ಚನೆ ನಡೆಸಿದರು. ಪುರುಷರು ಗಾಯತ್ರಿ ಜಪ ಮಾಡಿದರು.
ನನಗೂ ಮರಣ ಇದೆ ಎಂದು ಪ್ರತಿಯೊಬ್ಬರೂ ನೆನಪಿಸಿಕೊಂಡು ನಡೆಯಬೇಕು. ಆಗ ನಮ್ಮ ನಡೆ ಬೇರೆಯಾಗುತ್ತದೆ. ಧರ್ಮ ಮಾರ್ಗದಲ್ಲಿ ನಡೆಯುವ ಉತ್ತೇಜನ ಬರುತ್ತದೆ.| ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ