

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರುವಿನ ಶ್ರೀರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತರುದ್ರಯಾಗ 2025 ಜ.5ರಿಂದ 14ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು. ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಗೌರವ ಸಲಹೆಗಾರ ರಾಧಾಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ ಮಾತನಾಡಿ, ಶತರುದ್ರ ಯಾಗ ಅತ್ಯಂತ ಶಕ್ತಿಶಾಲಿಯಾದುದು. ಯಾಗದ ಸಂದರ್ಭ ಶುದ್ಧಾಚಾರದಲ್ಲಿ ಇದ್ದು ದೇವರ ನಾಮಸ್ಮರಣೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ದುಷ್ಟ ಶಕ್ತಿಗಳನ್ನು ನಿವಾರಿಸಿ ನಮ್ಮ ಜೀವನದ ಅಭ್ಯುದಯಕ್ಕೆ ರುದ್ರಯಾಗ ಪ್ರಯೋಜನಕಾರಿಯಾಗಲಿದೆ ಎಂದರು.
ಪುರೋಹಿತ ಅಮ್ಟಾಡಿ ಏರ್ಯ ರಘುರಾಮ ಮಯ್ಯ, ಉಪಾಧ್ಯಕ್ಷ ಅನಿಲ್ ಪಂಡಿತ್, ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಮಾಹಿತಿ ನೀಡಿದರು. ಭಜನಾ ಮಂದಿರ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗೌರವಾಧ್ಯಕ್ಷ ರವೀಂದ್ರ ಕಂಬಳಿ ಸುಜೀರುಬೀಡು, ಮೋನಪ್ಪ ಯಾನೆ ಮುಂಡಪ್ಪ ಪೂಜಾರಿ, ರಾಮಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕೋಶಾಧಿಕಾರಿ ಪ್ರಮೋದ್ ಕುಮಾರ್ ವಂದಿಸಿದರು.