

ಶಿರಸಿ: ಅತ್ಯಂತ ದುರ್ಲಭವಾದ ಮನುಷ್ಯನ ಜನ್ಮ ಪಡೆದ ನಾವು ಭಗವಂತನ ನಾಮ ಸ್ಮರಣೆ, ಸ್ತೋತ್ರ ಪಠಣ, ಪೂಜೆಗಳನ್ನು ಮಾಡಿ ಈ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರು ನುಡಿದರು.
ಅವರು ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ಚಾತುರ್ವಸ್ಯ ವ್ರತಾಚರಣೆಯಲ್ಲಿ ಸೇವೆ ಸಲ್ಲಿಸಿದ ಇಸಳೂರು ಸೀಮೆಯ ಶಿಷ್ಯರಿಗೆ ಆಶೀರ್ವಚನ ನುಡಿದರು.
ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯ ಜನ್ಮ ಅತ್ಯಂತ ವಿಭಿನ್ನ. ಅದನ್ನು ಜಪ, ಸ್ತೋತ್ರ ಪಠಣ ಇತರ ಸಾಧನಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ ಸಾಧನೆ ಮಾಡಿಕೊಳ್ಳಬೇಕು. ಆಗ ಈ ಜನ್ಮದ ಸಾರ್ಥಕ್ಯ ಹೆಚ್ಚುತ್ತದೆ ಎಂದರು.
ಮನುಷ್ಯ ಉಳಿದ ಪ್ರಾಣಿಗಳಿಗಿಂತ ಮೇಲ್ಮಟ್ಟದಲ್ಲಿ ಇರಲು ಅನೇಕ ಕಾರಣಗಳಿವೆ. ಉಳಿದ ಪ್ರಾಣಿಗಳಿಗೆ ಕೂಡ ಅವರದ್ದೇ ಆದ ಭಾಷೆ ಇದ್ದರೂ ಮನುಷ್ಯನಿಗೆ ಇರುವಂತೆ ಪರಿಷ್ಕೃತವಾಗಿ ಇಲ್ಲ. ಪರಿಷ್ಕೃತ ಮಾತು ಸಾಹಿತ್ಯದ ರಚನೆ ಎಲ್ಲವೂ ಮಾತಿನಿಂದ ಆಗುತ್ತದೆ. ಜ್ಞಾನದ ಪ್ರಸಾರಕ್ಕೆ ಅದ್ಭುತವಾದ ಮಾಧ್ಯಮ ಭಾಷೆ. ಇದು ಮನುಷ್ಯನಲ್ಲಿ ಇದೆ. ಮನುಷ್ಯನ ಬುದ್ಧಿ ಕೂಡ ಉಳಿದ ಪ್ರಾಣಿಗಳಿಂತ ಹೆಚ್ಚು ಪರಿಷ್ಕೃತವಾಗಿದೆ. ಹಿಂದೆ ಆಗಿದ್ದು ನೆನಪಿಸಿಕೊಳ್ಳಲು, ಮುಂದಿನದನ್ನು ಊಹಿಸಿಕೊಳ್ಳಲು ಬರುತ್ತದೆ. ಮಾತು, ಮನಸಿನಿಂದ ಅನುಕೂಲತೆ ಇದ್ದಂತೇ ಸಮಸ್ಯೆಯೂ ಇದೆ. ಮಾತಿನಿಂದ ಜಗಳ ಆಡಿಕೊಳ್ಳುತ್ತಾನೆ. ಜಗಳದ ಉದ್ದೇಶ ಮುಂದಿನ ತಲೆಮಾರಿನ ತನಕ ಮುಂದುವರಿದದ್ದೂ ಇದೆ. ಸಮಸ್ಯೆಗಳ ಜತೆ ಪರಿಹಾರ ಮಾಡಿಕೊಳ್ಳುವ ದಾರಿ ಕೂಡ ಮನುಷ್ಯನಿಗೆ ಇದೆ. ಭಗವಂತನ ಆರಾಧನೆ ಇದಕ್ಕೆ ಅತ್ಯುತ್ತಮ ಪರಿಹಾರದಲ್ಲಿ ಒಂದು ಎಂದರು. ಈ ವೇಳೆ ಆರ್.ಎಸ್. ಹೆಗಡೆ ಭೈರುಂಬೆ, ಸತ್ಯನಾರಾಯಣ ಭಟ್ಟ ಬಿಸಲಕೊಪ್ಪ, ಕ್ಯಾಪ್ಟನ್ ವಿನಾಯಕ ಭಟ್ಟ ದೊಡ್ನಳ್ಳಿ, ಗಂಗಾಧರ ಹೆಗಡೆ ಉಲ್ಲಾಳ, ಪ್ರಸನ್ನ ಭಟ್ಟ ಬಿಸ್ಲಕೊಪ್ಪ, ಕುಸುಮಾ ಭಟ್ಟ ಬಿಸ್ಲಕೊಪ್ಪ ಇತರರು ಇದ್ದರು.