

ಹುಮನಾಬಾದ್: ಮಾಜಿ ಸಚಿವ ಬಸವರಾಜ ಪಾಟೀಲ್ ಹುಮನಾಬಾದ್ ಸರಳ ವ್ಯಕ್ತಿತ್ವ, ಜಾತ್ಯತೀತ ಮನೋಭಾವದೊಂದಿಗೆ ಎಲ್ಲರ ಜತೆ ಉತ್ತಮ ಸಂಬಂಧ ಹೊಂದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳು ಸದಾ ಜನಮಾನಸದಲ್ಲಿ ಜೀವಂತವಾಗಿ ಉಳಿದಿವೆ ಎಂದು ಅನೇಕ ಮಠಾಧೀಶರು, ಗಣ್ಯರು ಸ್ಮರಿಸಿದರು.
ಪಟ್ಟಣದ ಶ್ರೀ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬಸವರಾಜ ಪಾಟೀಲ್ ಅವರ ೮ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದ ಅರಳಿ, ವಿಜಯಸಿಂಗ್, ಪ್ರಮುಖರಾದ ಸಂಜಯ ಜಾಗೀರದಾರ, ಧನರಾಜ ತಾಳಂಪಳ್ಳಿ, ಬಶಿರೋದ್ದಿನ್ ಹಾಲಹಿಪ್ಪರ್ಗಾ ಇತರರು ಮಾತನಾಡಿ, ನಾಲ್ಕೈದು ದಶಕದ ರಾಜಕೀಯ ಜೀವನದಲ್ಲಿ ಮಾಡಿರುವ ಅವರ ಕಾರ್ಯಸಾಧನೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಅವರೊಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿ ಬೀದರ್ ಜಿಲ್ಲಾ ಸರ್ವಾಂಗೀಣ ವಿಕಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇಂದು ನಮ್ಮ ಮಧ್ಯೆ ಭೌತಿಕವಾಗಿ ಇರದಿದ್ದರೂ ಅವರ ಮಾಡಿರುವ ನಾನಾ ಕೆಲಸಗಳು ಜೀವಂತವಾಗಿವೆ. ಅವರ ಮಾರ್ಗದರ್ಶನದಲ್ಲಿ ಪುತ್ರ ಮಾಜಿ ಸಚಿವ ರಾಜಶೇಖರ ಪಾಟೀಲ್ ಮತ್ತು ಕುಟುಂಬದವರು ಜನರ ಸೇವೆ ಮಾಡುತ್ತಿರುವುದು ವಿಶೇಷ ಎಂದರು.
ಸಾನ್ನಿಧ್ಯ ವಹಿಸಿ ಉದ್ಘಾಟನೆ ನೆರವೇರಿಸಿದ ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ, ಖೇಳಗಿ ಹಿರೇಮಠ ಪೀಠಾಧಿಪತಿ ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ, ಆಣದೂರಿನ ಸಂಘಾನಂದ ಭಂತೆ ಮಾತನಾಡಿ, ದಿ.ಬಸವರಾಜ ಪಾಟೀಲ್ ರಾಜಕೀಯ ಜತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿರುವುದು ಮಾದರಿಯಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ರ, ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಕ್ಷೇತ್ರದಿಂದ ರಾಜ್ಯಾದ್ಯಂತ ಹುಮನಾಬಾದ್ ಹೆಸರು ಗುರುತಿಸುವಂತೆ ತಂದೆ ದಿ.ಬಸವರಾಜ ಪಾಟೀಲ್ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ತಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭ್ಯುದಯಕ್ಕೆ ನಾನು ಮತ್ತು ಸಹೋದರರು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಬೀದರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ರಾಚಪ್ಪ ಪಾಟೀಲ್, ಸೋಮಶೇಖರ ಪಾಟೀಲ್, ಮಲ್ಲಿಕಾರ್ಜುನ ಮಾಶೆಟ್ಟಿ, ಲಕ್ಷ್ಮಣರಾವ ಬುಳ್ಳಾ, ಕೇಶವರಾವ ತಳಘಟಕರ್, ರಮೇಶ ಡಾಕುಳಗಿ, ಭಾರತಬಾಯಿ ಕೊಡಂಬಲ್, ಪಂಡಿತ ಚಿದ್ರಿ, ಶಂಕರ ದೊಡ್ಡಿ, ಮನ್ನಾನ್ ಸೇಠ, ಕಂಟೆಪ್ಪ ದಾನಾ, ದತ್ತಕುಮಾರ ಚಿದ್ರಿ, ಬಾಬು ಟೈಗರ್, ಪ್ರಕಾಶ ಬತಲಿ, ಪ್ರಭು ತಾಳಮಡಗಿ, ಅಫ್ಸರ್‌ಮಿಯಾ, ಓಂಕಾರ ತುಂಬಾ, ಉಮೇಶ ಜಮಗಿ, ರಾಹುಲ್ ನಂದಗಾಂವ, ರೇವಣಸಿದ್ದಪ್ಪ ಪಾಟೀಲ್, ಅಕ್ಷಯ ಪಾಟೀಲ್, ಗಣೇಶ ಪಾಟೀಲ್ ಇತರರಿದ್ದರು.
ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಇದಕ್ಕೂ ಮುನ್ನ ದಿವಂಗತರ ಸಮಾಧಿ ಸ್ಥಳದಲ್ಲಿ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಾನ್ನಿಧ್ಯ, ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿತು. ಪಾಟೀಲ್ ಕುಟುಂಬದವರು, ಅಭಿಮಾನಿಗಳು ನಮನ ಸಲ್ಲಿಸಿದರು.
ನಮ್ಮ ಕುಟುಂಬದ ಮೇಲೆ ಹುಮನಾಬಾದ್ ಕ್ಷೇತ್ರದ ಜನರ ಆಶೀರ್ವಾದವಿದೆ. ಜೀವಂತ ಇರುವವರೆಗೂ ಜನರ ಮಧ್ಯೆ ಇದ್ದುಕೊಂಡು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ. ಇಂದಿನ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ.
| ರಾಜಶೇಖರ ಪಾಟೀಲ್ ಮಾಜಿ ಸಚಿವ