

ಮೈಸೂರು: ರಂಗಸಂಗೀತ ಮೂಲಕ ರಂಗಭೀಷ್ಮ ಬಿ.ವಿ.ಕಾರಂತ ಸ್ಮರಣೆ ಮತ್ತು ರಂಗಾಯಣದ ಪಯಣವನ್ನು ಮೆಲುಕು ಹಾಕಲಾಯಿತು.
ಮೈಸೂರು ರಂಗಾಯಣದ ಸಂಸ್ಥಾಪನಾ ದಿನದ ಅಂಗವಾಗಿ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಭಾನುವಾರ ಸಂಜೆ ರಂಗಸಂಗೀತ ಕಾರ್ಯಕ್ರಮ ವಿಭಿನ್ನವಾಗಿ ನಡೆಯಿತು.
1989ರ ಜನವರಿ 14ರಂದು ಸಂಕ್ರಾಂತಿ ದಿನದಂದು ನಗರದಲ್ಲಿ ರಂಗಾಯಣ ಪ್ರಾರಂಭಗೊಂಡಿತು. ಇದು ದಿವಂಗತ ಬಿ.ವಿ. ಕಾರಂತರ ಕನಸಿನ ಕೂಸು. ಅವರ ರಂಗಾಯಣದ ಕಲ್ಪನೆ, ಕನಸು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಕಲಾವಿದರು, ತಾಂತ್ರಿಕ ವರ್ಗ, ಸಿಬ್ಬಂದಿ ಶ್ರಮದಿಂದ ಇದು ಅರಳಿ ನಿಂತಿದ್ದು, ಹೆಸರುವಾಸಿಯಾಗಿದೆ.
ಇಂತಹ ಹಿನ್ನೆಲೆಯ ರಂಗಾಯಣದ 34 ವರ್ಷ ಸುದೀರ್ಘ ಹಾದಿಯನ್ನು ಕಲಾವಿದರು ಸ್ಮರಣೆ ಮಾಡಿಕೊಂಡರು. ಅವರು ಹಿಂದೆ ಮಾಡಿದ ನಾಟಕ, ಅದಕ್ಕಾಗಿ ರಚನೆಗೊಂಡ ರಂಗಗೀತೆಗಳು, ನಾಟಕದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವ ಮೂಲಕ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.
ರೆಪರ್ಟರಿಯ ಹಾಲಿ ಕಲಾವಿದರಾದ ಬಿ.ಎನ್.ಶಶಿಕಲಾ, ಎಂ.ಎಸ್.ಗೀತಾ, ಕೆ.ಆರ್.ನಂದಿನಿ, ಎಸ್.ರಾಮನಾಥ್, ಕೃಷ್ಣಕುಮಾರ್ ಮತ್ತು ಮಾಜಿ ಕಲಾವಿದ ಮೈಮ್ ರಮೇಶ್ ಸೇರಿದಂತೆ ಇನ್ನಿತರರು ಒಟ್ಟಾಗಿ ರಂಗಗೀತಗಳ ಗಾಯನವನ್ನು ಸೊಗಸಾಗಿ ಪ್ರಸ್ತುತ ಪಡಿಸಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.