

ಮಡಿಕೇರಿ: ಕೊಡಗಿನ ಆಯುಧಪೂಜೆ ಎಂದೇ ಕರೆಯಲ್ಪಡುವ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ನರಮೇಧ ನಡೆದ ದೇವಟ್ ಪರಂಬುವಿನಲ್ಲಿ ಹಿರಿಯರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಬುಡಕಟ್ಟು ಕೊಡವರ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಸಂದರ್ಭ ಹಿರಿಯರನ್ನು ಸ್ಮರಿಸುವುದು ವಾಡಿಕೆಯಾಗಿದೆ. ಅದರಂತೆ ಕಾರ್ಯಕ್ರಮ ನಡೆದಿದೆ ಎಂದರು.
ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಕೊಡವ ಬುಡಕಟ್ಟು ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು, ಸ್ವಯಂ-ಆಡಳಿತ ಮತ್ತು ಎಸ್‌ಟಿ ಟ್ಯಾಗ್, ಜಾನಪದ ಕಾನೂನು ವ್ಯವಸ್ಥೆಗಳಿಗೆ ಸಾಂವಿಧಾನಿಕ ಭದ್ರತೆ, ಕೊಡವ ಜನಾಂಗೀಯ ಗುರುತನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಯುಎನ್‌ಒ ಗುರುತಿಸಬೇಕು. ದೇವಟ್ ಪರಂಬುವಿನಲ್ಲಿ ಪ್ರಾಣ ಕಳೆದುಕೊಂಡ ಕೊಡವರ ಸ್ಮರಣೆಗಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕ ನಿರ್ಮಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಎನ್‌ಸಿ ಪ್ರಮುಖರಾದ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಮಂದಪಂಡ ಮನೋಜ್ ಮತ್ತಿತರರು ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.