ಕನ್ನಡ ನಾಡು, ನುಡಿ ಸೇವೆಗೈದ ಮಹನೀಯರ ಸ್ಮರಣೆ

1 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಹಬ್ಬ ರಾಜ್ಯೋತ್ಸವವನ್ನು ನಾವೆಲ್ಲ ಅತ್ಯಂತ ಸಡಗರ, ಸಂಭ್ರಮದಿಂದ ಧ್ವಜಾರೋಹಣ ಮೂಲಕ ಆಚರಿಸುತ್ತಿದ್ದೇವೆ. ಇದು ನಮಗೆಲ್ಲರಿಗೂ ಪ್ರಮುಖ ಮತ್ತು ಹೆಮ್ಮೆಯ ಹಬ್ಬ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಆರ್​.ಎನ್​. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣ ದೇಶದ ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಾಮುಖ್ಯತೆ ಪಡೆದಿದೆ. ಇದೇ ಸಂದರ್ಭದಲ್ಲಿ ಭೌಗೋಳಿಕವಾಗಿ 19 ವಿವಿಧ ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಮನಸ್ಸುಗಳನ್ನು ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ 1956 ರಲ್ಲಿ ಒಗ್ಗೂಡಿಸಲಾಯಿತು. ಕನ್ನಡ ಮಾತನಾಡುವ ವಿವಿಧ ಭಾಗಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು ಎಂದರು.

ಕರ್ನಾಟಕ ಏಕೀಕರಣ ಚಳವಳಿ ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ. ಚಳವಳಿ ಪ್ರಮುಖರಾದ ಆಲೂರ ವೆಂಕಟರಾವ್​, ರಾ. ಹ. ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್ಪ, ಅದರಗುಂಚಿ ಶಂಕರಗೌಡ ಪಾಟೀಲ, ಇತರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಕರ್ನಾಟಕವು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಜ್ಯ. ಕನ್ನಡ ಭಾಷೆಯು ನಮ್ಮ ಪರಂಪರೆ, ಸಾಹಿತ್ಯವನ್ನು ಸಾರಿ ಹೇಳುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಎಲ್ಲ ಕಚೇರಿ, ಅಂಗಡಿಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೆ ತರಲಾಗಿದೆ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್​ ಆಯುಕ್ತ ಮಾನಿಂಗ್​ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ಇತರರು ಇದ್ದರು.

ಧ್ವಜಾರೋಹಣ ಬಳಿಕ ನಡೆದ ಪಥಸಂಚಲನದಲ್ಲಿ ಮಹಮದ್​ ಉಮರ್​ ನೇತೃತ್ವದ ಎನ್​. ಎ. ಮುತ್ತಣ್ಣ ಸ್ಮಾರಕ ಪೋಲಿಸ್​ ಮಕ್ಕಳ ವಸತಿ ಶಾಲೆ ತಂಡ ಪ್ರಥಮ ಸ್ಥಾನ, ಸುಜಯ ಪರಕಾಳಿ ನೇತೃತ್ವದ ಕೆ.ಇ.ಬೋರ್ಡ್ಸ್​ ಸ್ಕೂಲ್​ (ನೇವಲ್​ ಎನ್​ಸಿಸಿ) ತಂಡ ದ್ವೀತಿಯ , ಗೌತಮಿ ಭಟ್​ ನೇತೃತ್ವದ ಕೆ.ಎನ್​.ಕೆ. ಬಾಲಕಿಯರ ಶಾಲೆ ತಂಡ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net