

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ್ಯ ಯೋಧರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಡಾ ಎ.ಚೆನ್ನಪ್ಪ ಅಭಿಪ್ರಾಯಪಟ್ಟರು.
ನಗರದ ಕವಿವಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ ವತಿಯಿಂದ ಮಾನಸೋಲ್ಲಾಸ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ "ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ' ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನಮಗೆ ದೊರೆತಿರುವ ಸ್ವಾತಂತ್ರ್ಯ ಹಿರಿಯರ ಆತ್ಮಾಹುತಿಯಿಂದ ಬಂದಿದೆ. ಸ್ವಾತಂತ್ರ್ಯ ಯೋಧರ ತ್ಯಾಗವನ್ನು ನಿತ್ಯ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಧಾರವಾಡ ಜಿಲ್ಲೆ ದೇಶಕ್ಕೆ ಅನೇಕ ಸ್ವತಂತ್ರ ಸೇನಾನಿಗಳನ್ನು ನೀಡಿದ ಕೀರ್ತಿ ಹೊಂದಿದೆ ಎಂದರು.
ಪ್ರಾಧ್ಯಾಪಕ ಪ್ರೊ.ಎಲ್.ಪಿ. ರಾಜು ಮಾತನಾಡಿ, ಕರ್ನಾಟಕದ ಉಳಿದ ಭಾಗಗಳಿಗಿಂತ ಧಾರವಾಡದಲ್ಲಿ ನಡೆದ ಚಳವಳಿ ಹೆಚ್ಚು ವ್ಯಾಪಕ ಮತ್ತು ತೀವ್ರವಾದುದು. ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದು ಅಗತ್ಯವಾಗಿದೆ ಎಂದರು.
ಕೃಷ್ಣಮೂರ್ತಿ ಸಿ. ಮಾತನಾಡಿ, ಸ್ವಾತಂತ್ರ್ಯ ಚಳವಳಿಯ ಘಟನಾವಳಿಗಳನ್ನು ಇಂದಿನ ಯುವಕರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಾಧ್ಯಾಪಕರಾದ ಡಾ. ರಮೇಶ ನಾಯಕ, ಡಾ. ಜಗದೀಶ ಅಸೋದೆ, ಡಾ. ಆದಿತ್ಯ ಹೆಗಡೆ, ಡಾ. ಮಾಧುರಿ ಚೌಗುಲೆ, ಇತರರು ಇದ್ದರು. ಪ್ರೊ. ಎಲ್.ಪಿ. ಮಾರುತಿ ಸ್ವಾಗತಿಸಿದರು. ಡಾ.ಎಸ್.ವೈ. ಮುಗಳಿ ಪ್ರಾಸ್ತಾವಿಕ ಮಾತನಾಡಿದರು.