

ಮೈಸೂರು: ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ಸಿದ್ಧತೆ ನಡೆದಿದೆ. ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಶ್ರೀರಾಮ ನಾಮ ಸ್ಮರಣೆ ನಡೆಯಲಿದೆ. ನಗರದಲ್ಲಿರುವ ಶ್ರೀರಾಮ ಮಂದಿರ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಮಹಾಜನ ಸಭಾದಿಂದ ಬೆಳಗ್ಗೆ 9ಕ್ಕೆ ವೇದ ಬಳಗದಿಂದ ಪಾರಾಯಣ ಮತ್ತು ಶ್ರೀ ರಾಮದೇವರಿಗೆ ಅಭಿಷೇಕ ನಡೆಯಲಿದೆ. ಅಲ್ಲದೆ ಸಂಜೆ 6ಕ್ಕೆ ದೀಪೋತ್ಸವ ಜರುಗಲಿದೆ.
ಶಿವರಾಂಪೇಟೆ ಶ್ರೀ ರಾಮಾಭ್ಯುದಯ ಸಭಾದ ಶ್ರೀರಾಮ ಮಂದಿರದಲ್ಲಿ ಅರ್ಚಕ ಲಕ್ಷ್ಮೀನಾರಾಯಣಶಾಸ್ತ್ರಿ ಹಾಗೂ ಸಭಾದ ಟ್ರಸ್ಟ್ ಅಧ್ಯಕ್ಷ ಡಾ.ಎನ್. ಶ್ರೀರಾಮ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಬೆಳಗ್ಗೆ 7ಕ್ಕೆ ರುದ್ರಾಭಿಷೇಕ, ಶ್ರೀರಾಮ ಸೀತಾ ಹನುಮ ಅಷ್ಟೋತ್ತರ ಹಾಗೂ ರಾಮ ತಾರಕ ಹೋಮ, 11.30ರಿಂದ 12ರವರೆಗೆ ರಾಮ ಭಜನೆ, 12.30ಕ್ಕೆ ಮಹಾ ಮಂಗಳಾರತಿ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಜರುಗಲಿದೆ.
ವೀರನಗೆರೆ ಶ್ರೀ ವೀರಗಣಪತಿ ದೇವಸ್ಥಾನದಲ್ಲಿ ರಾಮಜ್ಯೋತಿ ಸೇವಾ ಸಮಿತಿಯಿಂದ ದೇವಸ್ಥಾನದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಅಶೋಕ ರಸ್ತೆಯಲ್ಲಿ ಸುಮಾರು 2 ಲಕ್ಷ ದೀಪಗಳನ್ನು ಬೆಳಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೀಪ ಬೆಳಗಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು ಅರಮನೆಯಲ್ಲಿ ವಿಶೇಷ ಪೂಜೆ
ಅರಮನೆ ಮಂಡಳಿ ಮತ್ತು ಮುಜರಾಯಿ ಇಲಾಖೆಯಿಂದ ಅರಮನೆ ಮುಂಭಾಗದಲ್ಲಿ ಪೂರ್ಣಾಹುತಿ, ಮಹಾಮಂಗಳಾರತಿ, ರಾಮ ತಾರಕ ಹೋಮ ನೆರವೇರಿಸಲಾಗುತ್ತಿದೆ. ಅಲ್ಲದೆ, ಪ್ರಸಾದ ವಿನಿಯೋಗ ಇರಲಿದ್ದು, ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುವುದು. ಇದರಲ್ಲಿ ಪಾಲ್ಗೊಳ್ಳಲು ಜಯರಾಮ, ಬಲರಾಮ ಮತ್ತು ಅಂಬಾವಿಲಾಸ ದ್ವಾರಗಳಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
111 ಅಡಿ ಉದ್ದದ ಊದುಬತ್ತಿ
ಸೈಕಲ್ ಪ್ಯೂರ್ ಅಗತ್‌ಬತ್ತೀಸ್ ಸಂಸ್ಥೆಯಿಂದ 111 ಅಡಿ ಉದ್ದದ ಅರಗ ಬತ್ತಿ ತಯಾರಿಸಿದ್ದು, ಬೆಳಗ್ಗೆ ನಗರದ ಕೋಟೆ ಆಂಜನೇಯಸ್ವಾಮಿ ದೇಗುಲ ಬಳಿ ಊದುಬತ್ತಿ ಹಚ್ಚಲಾಗುತ್ತದೆ.
ಇದಕ್ಕೆ 10 ಬಗೆಯ ಮೂಲ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು, ಗಂಧದ ಮರದ ಪುಡಿ ಜತೆಗೆ ಇದ್ದಿಲು, ಜೇನು, ದೇವದಾರು, ಬಿದಿರು, ಗುಗ್ಗುಲು, ಜಿಗುಟು, ಬೆಲ್ಲದ ಮಿಶ್ರಣ, ಸಾಸಿವೆ, ಸಾಂಬ್ರಾಣಿ ಹಾಗೂ ಬಿಳಿ ಸಾಸಿವೆ ಬಳಕೆ ಮಾಡಲಾಗಿದೆ. 18 ನುರಿತ ಕುಶಲಕರ್ಮಿಗಳು 23 ದಿನಗಳಲ್ಲಿ ಸಿದ್ಧಪಡಿಸಿದ್ದಾರೆ.
ಹಾಗೆಯೇ ಸಂಸ್ಥೆಯೂ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೂ 111 ಅಡಿ ಉದ್ದದ ಗಂಧದ ಕಡ್ಡಿ ಕಳುಹಿಸಿದ್ದು, ಶ್ರೀರಾಮ ಮಂದಿರ ಉದ್ಘಾಟನೆಯಂದು ದೇಶಾದ್ಯಂತ ಗಂಧದ ಕಡ್ಡಿ ಹಚ್ಚಲು 60 ಕಡೆಗಳಿಗೆ ಸರಬರಾಜು ಮಾಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿಲ್ಪಿ ಅರುಣ್ ಮನೆಯಲ್ಲೂ ರಾಮ ಸ್ಮರಣೆ
ಆಯೋಧ್ಯೆಯಲ್ಲಿ ಮಂದಿರ ಉದ್ಘಾಟನೆ ಹಿನ್ನೆಲೆ ಶಿಲ್ಪಿ ಅರುಣ್ ಯೋಗಿರಾಜ್ ಮನೆ ಮುಂದೆಯು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಈಗಾಗಲೇ ಮನೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಮನೆಯ ಮುಂಭಾಗ ಶಾಮಿಯಾನ ಹಾಗೂ ಫ್ಲೆಕ್ಸೃ್ ಹಾಕಲಾಗಿದೆ. ಸೋಮವಾರ ಮುಂಜಾನೆ ಕುಟುಂಬಸ್ಥರಿಂದ ವಿಶೇಷ ಪೂಜೆ ನೆರವೇರಲಿದೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ: ಶ್ರೀರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ವಿ.ಆರ್.ಟ್ರಸ್ಟ್‌ನಿಂದ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಗರದ ಆಲಮ್ಮ ಛತ್ರದಲ್ಲಿನ ಕುಂಚಿಟಿಗರ ಸಂಘದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶ್ರೀರಾಮ ತಾಕರ ಹೋಮ: ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಶ್ರೀರಾಮ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ನಗರದ ಸಿಎಫ್‌ಟಿಆರ್‌ಐ ಪಕ್ಕದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾಕರ ಹೋಮ, ಶ್ರೀರಾಮ ಜಪ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಅವಧೂತ ದತ್ತ ಪೀಠದ ವತಿಯಿಂದ ಶ್ರೀರಾಮ ದೇವರ ಅದ್ದೂರಿ ರಥೋತ್ಸವ ಆಯೋಜಿಸಲಾಗಿದೆ. ಜೈನ್ ಸಮಾಜದಿಂದ ಒಂದು ಲಕ್ಷ ಲಾಡು ತಯಾರಿಸುತ್ತಿದ್ದು, ಜ.22ರಂದು ಸಾರ್ವಜನಿಕರಿಗೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು ಶ್ರೀರಾಮನ ಭಾವಚಿತ್ರವಿರಿಸಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆಗೆ ಮಾಡಲು ಯೋಜನೆ ರೂಪಿಸಿವೆ.