

ಕುಶಾಲನಗರ: ನಡೆದಾಡುವ ದೇವರೆಂದೇ ಭಕ್ತವಲಯದಲ್ಲಿ ಹೆಸರಾಗಿದ್ದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯ ಆರನೇ ವರ್ಷದ ಸ್ಮರಣೆ ಕುಶಾಲನಗರದಲ್ಲಿ ಮಂಗಳವಾರ ನಡೆಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸ್ಥಳೀಯ ಸೋಮೇಶ್ವರ ದೇವಾಲಯದಲ್ಲಿ ಶ್ರೀಗಳ ಸ್ಮರಣೆ ಅಂಗವಾಗಿ ಕುಶಾಲನಗರದ ಕಾಫಿ ಕೃಷಿಕ ಜೆಮ್ಸಿ ಪೊನ್ನಪ್ಪ, ನಿವೃತ್ತ ಕಂದಾಯಾಧಿಕಾರಿ ಎಂ.ಬಿ.ಬಸವರಾಜು ಹಾಗೂ ಕುಶಾಲನಗರದ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾವತಿ ಎಂಬವರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಕಾಫಿ ಬೆಳೆಗಾರ ಜೆಮ್ಸಿ ಪೊನ್ನಪ್ಪ, ಸಿದ್ದಗಂಗಾ ಮಠದಲ್ಲಿ ಅನ್ನ, ಆಶ್ರಯ ಪಡೆದವರು ಧನ್ಯರು. ಜಾತಿ ಮತಗಳ ಬೇಧವೆಣಿಸದೇ ಎಲ್ಲಾ ಧರ್ಮಗಳ ಬಡ ಮಕ್ಕಳಿಗೆ ತ್ರಿವಿಧ ದಾಸೋಹದ ಕಾಯಕ ಮಾಡಿದ ಶಿವಕುಮಾರ ಸ್ವಾಮೀಜಿ ಭೂಮಿ ಇರುವ ತನಕ ಸ್ಮರಣೀಯರು ಎಂದರು.
ಕುಶಾಲನಗರ ಗಣಪತಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಇಡೀ ನಾಡು ಕಂಡ ಶ್ರೇಷ್ಠ ಸಂತ. ಇಡೀ ನಾಡು ಬರಗಾಲಕ್ಕೆ ತುತ್ತಾಗಿ ತತ್ತರಿಸಿದ ಸಂದರ್ಭ ಜೋಳಿಗೆ ಹಿಡಿದು ಭಿಕ್ಷೆ ಮಾಡಿ ಬಡ ಮಕ್ಕಳನ್ನು ಪೋಷಿಸಿ ವಿದ್ಯೆ ನೀಡಿ ಅವರ ಬದುಕಲ್ಲಿ ಬೆಳಕಾದ ಮಹಾ ಮಹಿಮ ಎಂದು ಬಣ್ಣಿಸಿದರು.
ಶಿಕ್ಷಕ ಹುಲುಸೆ ಬಸವರಾಜು ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ದಗಂಗಾ ಕ್ಷೇತ್ರದ ಕುರಿತು ಮಾತನಾಡಿದರು. ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತಾ ಶಿಕ್ಷಕ ಪುಟ್ಟರಾಜು ಹಾಗೂ ಅಕ್ಕನ ಬಳಗದ ಸದಸ್ಯರು ವಚನಗಾಯನ ಮಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್, ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಕರುಣ, ಕಾರ್ಯದರ್ಶಿ ಮಮತಾ ರವೀಶ್, ಕುಶಾಲನಗರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಮಧುಸೂದನ್, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ನಂದೀಶ್, ಕೂಡಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಇತರರಿದ್ದರು.