

ವಿಜಯಪುರ: ಸ್ವಾತಂತ್ರ್ಯ ನಂತರ ದೇಶ ಕಂಡ ಐದು ಯುದ್ದಗಳಲ್ಲಿ ಕಾರ್ಗಿಲ್ ಯುದ್ದ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಈ ಯುದ್ದದಲ್ಲಿ ಅನೇಕ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಯೋಧರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ವಿಜಯವಾಣಿ ಹಾಗೂ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಯುದ್ದದಲ್ಲಿ ಅನೇಕ ಪ್ರಾಣ ತ್ಯಾಗದ ಫಲವಾಗಿ ದೇಶಕ್ಕೆ ಜಯ ಲಭಿಸಿತು. ಈ ಯುದ್ದದಲ್ಲಿ ಅನೇಕ ಸೈನಿಕರು ಜೀವ ತೆತ್ತರೆ ಅನೇಕರು ಗಾಯಗೊಂಡರು. ಅವರ ತ್ಯಾಗದ ಫಲ ಕಾರ್ಗಿಲ್ ನಲ್ಲಿ ವಿಜಯ ಸಾಧಿಸಲು ಸಾಧ್ಯವಾಯಿತು. ಅದರ ಸವಿನೆನಪಿಗಾಗಿ ಪ್ರತಿ ವರ್ಷ ವಿಜಯವಾಣಿ ಹಾಗೂ ಮಾಜಿ ಸೈನಿಕರ ಕಲ್ಯಾಣ ಸಂಘ ಆಯೋಜಿಸುತ್ತಾ ಬಂದಿರುವ ವಿಜಯಯೋತ್ಸವ ಕಾರ್ಯಕ್ರಮ ಅರ್ಥಪೂರ್ಣ ವಾದಂಥದ್ದು ಎಂದರು.
ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸೈನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಜನ ಜಿಲ್ಲಾಡಳಿತ ಕಚೇರಿಗೆ ಅಲೆಯುತ್ತಿರುತ್ತಾರೆ. ಇದನ್ನು ತಪ್ಪಿಸಲು ಸಾಕಷ್ಟು ಶ್ರಮವಹಿಸಲಾಗಿದೆ. ಮಾಜಿ ಸೈನಿಕರ ಕಲ್ಯಾಣ ಸಂಘ ಕೂಡ ಇದ್ದು, ಸೈನಿಕರ ಕಲ್ಯಾಣಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಲ್ಲಿ ಮಾಜಿ ಸೈನಿಕರ ಕಲ್ಯಾಣ ಸಂಘ ಪರೇಡ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಮಾಜಿ ಸೈನಿಕರು ತಮ್ಮ ಮೆಡಲ್ ಗಳನ್ನು ಹಾಕಿಕೊಂಡು ಪರೇಡ್ ನಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಸ್ಪೂರ್ತಿ ಸಿಗಲಿದೆ ಎಂದರು.
ರಾಮಪ್ಪ ಎಲ್.ಕೆ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ ಪಿ ಬಸವರಾಜ ಯಲಿಗಾರ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಚೇರಮನ್ ಸುರೇಶ ಬಿರಾದಾರ, ಸಂಗೀತಾ ಬೊಮ್ಮನಹಳ್ಳಿ, ಶಿವಾನಂದ ಕೆಲೂರ, ಸಂಘದ ಗೌರವಾಧ್ಯಕ್ಷ ಎಚ್.ಆರ್. ಮಾಚಪ್ಪನವರ, ಕರ್ನಲ್ ಸಂಗಪ್ಪ, ಅರುಣ ಹುಂಡೆಕಾರ ಮತ್ತಿತರರಿದ್ದರು.
ಕಾಶಿಲಿಂಗ ಶೇಗಾವಿ ನೇತೃತ್ವದ ಸ್ಕೌಟ್ ಮತ್ತು ಗೈಡ್ಸ್ ಕೆಡೆಟ್ ಗಳು ಜ್ಯೋತಿ ಪ್ರಜ್ವಲಿಸಿದರು. ಹುತಾತ್ಮ ಯೋಧರಿಗೆ ಪುಷ್ಪಸಮರ್ಪಿಸಿ ಮೌನ ಆಚರಿಸಲಾಯಿತು. ವಿಜಯವಾಣಿಯ ವಿಶೇಷ ಪುರವಣಿ ಬಿಡುಗಡೆಗೊಳಿಸಲಾಯಿತು. ಗುರುಕುಲ ಎಆರ್ ಜೆ ಶಾಲೆ ವಿದ್ಯಾರ್ಥಿಗಳ ನೃತ್ಯ ರೂಪಕ ಮೈ ನವಿರೇಳಿಸಿತು. ನಿವೃತ್ತ ಶಿಕ್ಷಕ ಹುಮಾಯೂನ್ ಮಮದಾಪುರ ನಿರೂಪಿಸಿದರು.