ಸರ್ವಸ್ವ ತ್ಯಾಗ ಮಾಡಿದ ಮಾತೆಯನ್ನು ಮರೆಯದಿರಿ

h9-Avva 2
Published on

ಹುಬ್ಬಳ್ಳಿ: ಮಕ್ಕಳಿಗಾಗಿ ತಾಯಿಯು ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಅದೇ ತ್ಯಾಗವನ್ನು ವಯಸ್ಸಾದ ತಾಯಿಯ ಮೇಲೆ ಮಕ್ಕಳು ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಅವ್ವ ಸೇವಾ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವರು ತಾಯಿಯಾಗುವುದಿಲ್ಲ. ಆದರೆ, ತಾಯಿ ದೇವರಾಗುತ್ತಾಳೆ. ಬದಲಾದ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಆತ್ಮೀಯತೆ ಮರೆಯಾಗುತ್ತಿದೆ. ತಾಯಿ, ತಂದೆಯ ಮೇಲೆ ಮಕ್ಕಳು ಪ್ರೀತಿ ತೋರಬೇಕು. ಅವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಅವರು ತಮ್ಮ ಜೀವ ತೇಯ್ದು ನಮಗೆ ಜೀವ ಕೊಟ್ಟಿರುವುದನ್ನು ಮರೆಯಬಾರದು ಎಂದರು. ನನ್ನ ತಾಯಿ ಮುಗ್ಧೆ, ಪ್ರಾಮಾಣಿಕರು. ಅವರು ನನ್ನ ಓದಿಗಾಗಿ ಒಡವೆ ಮಾರಿದ್ದರು. ಅವರ ನೆನಪಿಗಾಗಿ ಟ್ರಸ್ಠ್ ಸ್ಥಾಪಿಸಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಸಾಧಕಿಯರಿಗೆ ಸತ್ಕಾರ, ಪ್ರತಿಭಾ ಪ್ರೋತ್ಸಾಹ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಇನ್ನೂ ಅನೇಕ ಜನಪರ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು. ಶತಾಯುಷಿ ಯಲ್ಲಮ್ಮ ಗುರಪ್ಪ ಶಿರಕೋಳ ಹಾಗೂ ಹಿಂದುಸ್ಥಾನಿ ಗಾಯಕಿ ಪೂರ್ಣಿಮಾ ಮುಕ್ಕುಂದಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ, ಪ್ರೊ. ಕೆ.ಎಸ್. ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್. ಹುದ್ದಾರ, ಪಾಲಿಕೆ ಸದಸ್ಯೆ ಮೀನಾಕ್ಷಿ ಒಂಟಮುರಿ ಇತರರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಕ್ಕು, ಸಮಾನತೆ ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗಬೇಕಾದರೆ, ಮೊದಲು ಮಹಿಳೆಯರು ಮಾನಸಿಕವಾಗಿ ಸದೃಢವಾಗಿರಬೇಕು. ಸಕಾರಾತ್ಮಕ ಕೆಲಸಕ್ಕೆ ಮನಸ್ಸು ಸಿದ್ಧಗೊಳಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ನೈತಿಕತೆ ಪಾಠ ಕಲಿಸಿ, ಸಾಮಾಜಿಕ ಆರೋಗ್ಯ ಕಾಪಾಡಬೇಕು. ಮನಸ್ಸು ಆರೋಗ್ಯದಿಂದ ಇದ್ದಾಗ ದೇಹವೂ ಆರೋಗ್ಯವಾಗಿರುತ್ತದೆ. -ಪ್ರೊ. ವಿಜಯಲಕ್ಷ್ಮೀ ಅಮ್ಮಿನಭಾವಿ, ನಿವೃತ್ತ ಪ್ರಾಧ್ಯಾಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net