ಆರೋಗ್ಯ ಪಾಲನೆಗೆ ಧನ್ವಂತರಿ ಸ್ಮರಿಸಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

1
Published on

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡವರು ಮಾತ್ರ ನಾಡಿಗಾಗಿ ಏನಾದರೂ ಕೊಡುಗೆ ನೀಡಲು ಸಾಧ್ಯ. ಹಾಗಾಗಿ, ಸಮಗ್ರ ಆರೋಗ್ಯ ಪರಿಕಲ್ಪನೆಯನ್ನು ನಮ್ಮ ಹಿರಿಯರು ಧಾರ್ಮಿಕ ಚಟುವಟಿಕೆ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಅಗ್ರಹಾರದಲ್ಲಿರುವ ಉತ್ತರಾದಿ ಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿನ ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವದಲ್ಲಿ ಮಂಗಳವಾರ ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದು ಎಲ್ಲರಿಗೂ ಸಿರಿವಂತಿಕೆ ಇದೆ. ಆದರೆ, ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇಡೀ ಸಮಾಜ ಆರೋಗ್ಯವಂತವಾಗಿ ಇರಬೇಕು ಎಂಬ ಕಾರಣಕ್ಕಾಗಿ ಇಲ್ಲಿ ಧನ್ವಂತರ ನೆಲೆ ನಿಂತಿದ್ದಾನೆ. ಆತನ ಕೃಪೆಯಿಂದಲೇ ನಮ್ಮ ನಾಡು ಅಭ್ಯುದಯ ಸಾಧಿಸಲಿ ಎಂದು ಸ್ವಾಮೀಜಿ ಆಶಿಸಿದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಧನ್ವಂತರಿ ದೇವಾಲಯದ ನೂತನ ವಿನ್ಯಾಸದ ಗೋಡೆ ಅನಾವರಣಗೊಳಿಸಿ ಸಮಾತನಾಡಿ, ಗುರುಮನೆ- ಅರಮನೆ ಪವಿತ್ರ ಸಂಬಂಧ ಇದ್ದರೆ ನಾಡು ಸುಭಿಕ್ಷೆಯಾಗಿರುತ್ತದೆ. ನಮ್ಮ ಪರಂಪರೆಯ ಎಲ್ಲ ರಾಜ, ಮಹಾರಾಜರೂ ಉತ್ತರಾದಿ ಮಠದ ಗುರುಗಳಿಗೆ ಭಕ್ತಿ, ಗೌರವ ಮತ್ತು ವಿಧೇಯತೆಯನ್ನು ತೋರಿ ರಾಜ್ಯಭಾರ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೂ ಸಾಗುತ್ತೇವೆಂದರು.

ಶ್ರೀಗಳು ಯದುವೀರ ಕೃಷ್ಣದತ್ತರಿಗೆ ಮಠದ ವತಿಯಿಂದ ಸನ್ಮಾನಪತ್ರ ನೀಡಿ ಗೌರವಿಸಿದರು. ಶ್ರೀಗಳು ಧನ್ವಂತರಿಗೆ ಮಹಾಪೂಜೆ ನೆರವೇರಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net