

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಹಲವು ಪರಿಹಾರ ಕ್ರಮಗಳನ್ನು ಸೂಚನೆ. ಭವಿಷ್ಯತ್ತಿನಲ್ಲಿ ಉದ್ಭವಬಹುದಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಿಳಿಸಲಾಯಿತು.
ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಚಾರ ನಿಯಂತ್ರಣ ಪೊಲೀಸರ ಜಂಟಿ ಸಭೆ ಬುಧವಾರ ನಡೆಯಿತು. ಈ ಸಮಸ್ಯೆ ಬಗೆಹರಿಸಲು ಲಭ್ಯ ಅವಕಾಶಗಳ ಬಗ್ಗೆ ಪರಾಮರ್ಶಿಸಿತು.
ಮಿಲಿಟರಿ ಜಮೀನು ಬಳಿಯ ದಟ್ಟಣೆಯನ್ನು ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಹೆಬ್ಬಾಳದ ಮಳೆ ನೀರು ಚರಂಡಿ ಮೇಲಿನ ಸೇತುವೆ ವಿಸ್ತರಣೆ, ಹೆಬ್ಬಾಳ ಮೇಲ್ಸೇತುವೆಯಿಂದ ಮಿಲಿಟರಿ ಜಮೀನಿನವರೆಗೆ ಸೇವಾ ರಸ್ತೆ ಕಾಮಗಾರಿ ಪ್ರಾರಂಭ ಹಾಗೂ ಮಿಲಿಟರಿ ಫಾರ್ಮ್ ಬಸ್ ನಿಲ್ದಾಣದ ಹೆಚ್ಚಿನ ಬಸ್‌ಗಳ ನಿಲುಗಡೆಗೆ ಅನುವು ಮಾಡಿಕೊಡಲು ಬಸ್ ಬೇ ಸುಧಾರಿಸಲು ಸಭೆ ನಿರ್ಧರಿಸಿತು.
ಜಕ್ಕೂರು ಏರೋಡ್ರೋಮ್ ಬಳಿ ಸಂಚಾರ ಸುಗಮಗೊಳಿಸಲು ಯಲಹಂಕ ಸಿಗ್ನಲ್‌ನಿಂದ ಜಕ್ಕೂರು ಜಂಕ್ಷನ್, ಜಕ್ಕೂರು ಏರೋಡ್ರೋಮ್‌ವರೆಗೆ ಸರ್ವಿಸ್ ರಸ್ತೆಯನ್ನು ಪ್ರಾರಂಭಿಸಲು ಕೃಷ್ಣಬೈರೇಗೌಡ ನಿರ್ದೇಶಿಸಿದರು.
ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಾಗಿ ಕೊಡಿಗೇಹಳ್ಳಿ, ಬ್ಯಾಟರಾಯನಪುರ ಮತ್ತು ಜಕ್ಕೂರು ಜಂಕನ್‌ಗಳಲ್ಲಿ ಕೆಳ ಸೇತುವೆ (ಅಂಡರ್ ಪಾಸ್)ಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಯಲಹಂಕ ಮತ್ತು ಬಾಗಲೂರು ಕ್ರಾಸ್ ನಡುವಿನ ಪಾಲನಹಳ್ಳಿಯಲ್ಲಿ ಹೆದ್ದಾರಿಯಿಂದ ಪ್ರವೇಶ/ ನಿರ್ಗಮನದ ವಿನಂತಿ ಪರಿಶೀಲನೆ, ರಾಷ್ಟ್ರೀಯ ಹೆದ್ದಾರಿ ಎತ್ತರಿಸಿದ ರಸ್ತೆಯ ಅಡಿಯಲ್ಲಿ ಆಯ್ದ ಬಿಂದುಗಳಲ್ಲಿ ಯೂ ಟರ್ನ್ ನಿಬಂಧನೆ ಕಾರ್ಯಸಾಧತೆ ಪರೀಕ್ಷಿಸುವುದು, ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಮಿಲಿಟರಿ ಫಾರ್ಮ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚ ಗೃಹ ನಿರ್ಮಿಸಬೇಕೆಂದು ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.