

ಮಂಗಳೂರು: ತಾಂತ್ರಿಕ ಕಾರಣಗಳಿಂದ ಬೆಂಗಳೂರಿನಲ್ಲಿ ಉಳಿದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ರೆಮ್‌ಡಿಸಿವಿರ್ ಚುಚ್ಚುಮದ್ದಿನ ದಿನದ ಸಂಗ್ರಹವನ್ನು ತಮ್ಮ ಸಂಪರ್ಕ, ಅನುಭವ ಬಳಸಿ ಸಕಾಲದಲ್ಲಿ ಮಂಗಳೂರು ತಲುಪಿಸುವ ಮೂಲಕ ಔಷಧ ವ್ಯಾಪಾರಸ್ಥರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್ ಕಾಮತ್ ಮತ್ತು ಅವರ ಪುತ್ರ ಸಂಜಯ ಕಾಮತ್ ಗಮನ ಸೆಳೆದಿದ್ದಾರೆ.
ಸೋಂಕಿತರ ತುರ್ತು ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್ ಚುಚ್ಚುಮದ್ದಿನ ಪಾತ್ರ ಮುಖ್ಯ. ದಕ್ಷಿಣ ಕನ್ನಡ ಜಿಲ್ಲೆಗೆ ಅವಶ್ಯಕ ರೆಮ್‌ಡಿಸಿವಿರ್ ನಿಯಮಿತವಾಗಿ ಬಸ್ ಮೂಲಕ ಮಂಗಳೂರು ತಲುಪುತ್ತದೆ. ಆದರೆ ಸೋಮವಾರ ಬಿಲ್ಲಿಂಗ್ ಕ್ರಮದಲ್ಲಿ ಕಾಣಿಸಿಕೊಂಡ ವ್ಯತ್ಯಯದಿಂದ ರೆಮ್‌ಡಿಸಿವರ್ ಸಂಗ್ರಹ ಸಾಗಿಸಲು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಸ್ ಕಚೇರಿ ಸಿಬ್ಬಂದಿ ಒಪ್ಪಲಿಲ್ಲ. ಬಸ್ ನಿಗದಿತ ಸಮಯಕ್ಕೆ ಔಷಧ ಸಂಗ್ರಹ ತೆಗೆದುಕೊಳ್ಳದೆ ಬೆಂಗಳೂರಿನಿಂದ ಹೊರಟಿತ್ತು.
ವಿಷಯ ತಿಳಿದ ಮಂಗಳೂರು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್‌ಗಳಾದ ರಮಾಕಾಂತ ಕುಂಟೆ ಮತ್ತು ಶಂಕರ ನಾಯಕ್ ಶ್ರೀಧರ ಕಾಮತ್ ಅವರನ್ನು ಸಂಪರ್ಕಿಸಿ ನೆರವು ಕೋರಿದರು. ಶ್ರೀಧರ್ ಮತ್ತು ಅವರ ಪುತ್ರ ತಂದೆ ನಡೆಸುತ್ತಿರುವ ಉದ್ಯಮದ ಆಡಳಿತ ಪಾಲುದಾರ ಸಂಜಯ ಕಾಮತ್ ಕೂಡಲೇ ಕಾರ್ಯಪ್ರವೃತ್ತರಾಗಿದ್ದರು.
ಸಂಜಯ ಅವರ ಕೋರಿಕೆಯಂತೆ ಬೆಂಗಳೂರಿನಲ್ಲಿರುವ ಅವರ ಸ್ನೇಹಿತ ನಿತಿನ್ ಚಕ್ರವರ್ತಿ ಮಲ್ಲೇಶ್ವರದಲ್ಲಿರುವ ಬಸ್ ನಿಲ್ದಾಣದಿಂದ ಬೆಳಗ್ಗೆ 10.30ಕ್ಕೆ ರೆಮ್‌ಡಿಸಿವಿರ್ ಸಂಗ್ರಹದ ಬಾಕ್ಸ್ ತೆಗೆದುಕೊಂಡು 11.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿಸಿದ್ದರು. ಅಲ್ಲಿಂದ ಮಧ್ಯಾಹ್ನ ಹೊರಟ ಬಾಕ್ಸ್ ವಿಮಾನ ಮೂಲಕ ಮಧ್ಯಾಹ್ನ 2ಗಂಟೆ ಒಳಗೆ ಮಂಗಳೂರು ತಲುಪಿದೆ. ಮಂಗಳೂರು ತಲುಪಿದ ಚುಚ್ಚುಮದ್ದಿನ ಬಾಟಲಿಗಳು ಆಸ್ಪತ್ರೆಗಳಿಗೆ ರವಾನೆಯಾಗಿದೆ.
ಕೋವಿಡ್ ರೋಗಿಗಳ ಜೀವ ಉಳಿಸುವ ದೊಡ್ಡ ಕೆಲಸದಲ್ಲಿ ನಮ್ಮದು ಅಳಿಲ ಸೇವೆ. ನಮ್ಮ ಕೆಲಸದಲ್ಲಿ ಗೆಳೆಯ ನಿತಿನ್ ಚಕ್ರವರ್ತಿ, ಇಂಡಿಗೋ ವಿಮಾನ ಸಂಸ್ಥೆಯ ಬೆಂಗಳೂರು ಮತ್ತು ಮಂಗಳೂರು ತಂಡಗಳು ತಂಡಗಳು ನೀಡಿರುವ ಸಹಕಾರ ದೊಡ್ಡದು.
- ಸಂಜಯ ಕಾಮತ್