

ಮೈಸೂರು: ದೇಶದಲ್ಲಿ ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರದೆ ವಿದೇಶಿ ತಂತ್ರಜ್ಞಾನವನ್ನೇ ಅವಲಂಬಿಸಿದ್ದರೆ ಮತ್ತೆ ನಾವು ಗುಲಾಮರಾಗಬೇಕಾಗುತ್ತದೆ ಎಂದು ಧಾರವಾಡ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಸ್ಥ ಪ್ರೊ.ಎಸ್.ಎಂ.ಶಿವಪ್ರಸಾದ್ ಎಚ್ಚರಿಸಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಬನ್ನಿಮಂಟಪದ ವೈದ್ಯಕೀಯ ಕಾಲೇಜಿನ ಶ್ರೀರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯಭಾಷಣ ಮಾಡಿದರು.
ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ನ್ಯಾನೋ, ಬಯೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ಜತೆಯಾಗಿ ಸಾಗುತ್ತಿರುವ ಕಾಲದಲ್ಲಿ ನಾವು ಬದುಕಿದ್ದೇವೆ. ರೋಬಾಟ್, ಚಾಟ್ ಜಿಪಿಟಿ ಅಭಿವೃದ್ಧಿಗೊಂಡು ಬಳಕೆಯಲ್ಲಿದ್ದು, ಅವು ಮುಂದಿನ 15 ವರ್ಷಗಳಲ್ಲಿ ಪ್ರಮುಖ ಕ್ಷೇತ್ರಗಳನ್ನು ಆವರಿಸಲಿದೆ. ಇದರಿಂದ ಅನೇಕ ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೊಸ ತಂತ್ರಜ್ಞಾನಗಳು ಉದ್ಯೋಗ ಕಸಿಯುತ್ತವೆ ಎನ್ನುವು ಆತಂಕದ ನಡುವೆಯೂ ಮಾನವ ಶಕ್ತಿಯನ್ನು ಉತ್ತೇಜಿಸಲು ಸಹಾಯಕವಾಗಿದೆ. ನ್ಯಾನೋ, ಬಯೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ಮೂರು ತಂತ್ರಜ್ಞಾನಗಳು ಸಂಗಮವಾಗಿರುವ ಕಾಲದಲ್ಲಿ ಅವನ್ನು ಧನಾತ್ಮಕವಾಗಿ ತೆಗೆದುಕೊಂಡು ಹೊಸ ಬದಲಾವಣೆಯ ಬಗ್ಗೆ ಯುವ ಸಮೂಹ ಚಿಂತಿಸಬೇಕು ಎಂದು ಹೇಳಿದರು.
ವಿಜ್ಞಾನ ಹಾಗೂ ತಂತ್ರಜ್ಞಾನ ಸಾಕಷ್ಟು ಬದಲಾವಣೆ ಅಗುತ್ತಿದ್ದು, ಅದಕ್ಕೆ ನಾವೂ ಹೊಂದಿಕೊಳ್ಳುವ ಅಗತ್ಯವಿದೆ. ನಾವು ಹೆಚ್ಚಾಗಿ ವಿದೇಶಿ ತಂತ್ರಜ್ಞಾನ ಅವಲಂಬನೆ ಮಾಡುವುದನ್ನು ಮುಂದುವರಿಸಿದರೆ ಗುಲಾಮರಾಗಿ ಇರಬೇಕಾಗುತ್ತದೆ. ಆದ್ದರಿಂದ ಯುವ ಸಮೂಹ ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು.
ಚಾಟ್ ಜಿಪಿಟಿಗಳ ಜ್ಞಾನವನ್ನೂ ಮೀರುವ ಜ್ಞಾನ ಸಂಪತ್ತು ನಮ್ಮದಾಗಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾಂತ್ರಿಕೃತ ಬೋಧನಾ ವಿಧಾನದ ಬದಲಾಗಿ ಎಲ್ಲರ ಹೃದಯ ಮುಟ್ಟುವ ವಿಷಯದ ಬಗ್ಗೆ ಕೇಂದ್ರೀಕರಿಸಿದರೆ ಉದ್ಯೋಗದಲ್ಲಿ ಬೆಳೆಯಲು ಸಾಧ್ಯ ಎಂದರು.
ನಾವು ಬಳಸುತ್ತಿರುವ ಗೂಗಲ್, ಚಾಟ್ ಜಿಪಿಟಿ ಹೀಗೆ ಹಲವು ತಂತ್ರಜ್ಞಾನ ವಿದೇಶಿಗರ ನಿಯಂತ್ರಣದಲ್ಲಿವೆ. ಅದಕ್ಕೆ ಸೆಡ್ಡು ಹೊಡೆಯಬಲ್ಲ ಅನ್ವೇಷಣೆಗಳು ಭಾರತದಲ್ಲಿ ನಡೆಯಬೇಕಿದೆ. ನಾವು ಬದಲಾಗದಿದ್ದರೆ ಯಂತ್ರಗಳ ಅಡಿಯಾಳುಗಳಾಗಿಯೇ ಉಳಿಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಂಜಿನಿಯರ್, ವೈದ್ಯಕೀಯ ಹಾಗೂ ಸಮಾಜದ ಎಲ್ಲ ಪ್ರಮುಖ ಹುದ್ದೆಗಳು ವಿಜ್ಞಾನದ ಮುಂದೆ ಗೌಣವಾಗುತ್ತದೆ. ಪದವಿಯ ಅನುಭವ, ಹೊಸ ಜ್ಞಾನದೊಂದಿಗೆ ಹೊಸ ಅಧ್ಯಾಯನಕ್ಕೆ ತೆರಳುವ ಅರಿವು ನಮ್ಮಲ್ಲಿ ಅಗತ್ಯ ಎಂದರು.
ಕೇವಲ ಪದವಿಯೊಂದೇ ಸಾಲದು. ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ. ಹಿರಿಯರ ಕಾಲದ ಜ್ಞಾನ ಸಾಕಾಗುವುದಿಲ್ಲ. ನಾವು ಅನ್ವೇಷಿಸುವ ಹೊಸ ವಿಚಾರವೇ ನಮ್ಮ ಸ್ಥಾನಮಾನವನ್ನು ನಿರ್ಧರಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆ ಪದವಿಯನ್ನಷ್ಟೇ ನೀಡುತ್ತದೆ. ಯಾವ ಕ್ಷಣಕ್ಕೆ, ಹೇಗೆ ಸಿದ್ದರಾಗಿರಬೇಕೆಂಬುದನ್ನು ತಿಳಿಸುತ್ತಿಲ್ಲ. ಹಾಗಾಗಿ ಮುಂದಿನ ಪೀಳಿಗೆ ಈ ತಪ್ಪನ್ನು ಮಾಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಒಟ್ಟು 321 ವಿದ್ಯಾರ್ಥಿಗಳು 151 ಪದವಿ, 170 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಮಾಣಪತ್ರ ಸ್ವೀಕರಿಸಿದರು. 23 ಪ್ರತಿಭಾನ್ವಿತ ವಿದ್ಯಾಥಿಗಳು ಚಿನ್ನದ ಪದಕ ಮತ್ತು ಮೆರಿಟೋರಿಯಸ್ ಪ್ರಮಾಣಪತ್ರ ಸ್ವೀಕರಿಸಿದರು.
ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ, ಜೆಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಉಪಪ್ರಾಂಶುಪಾಲ ಡಾ.ಪ್ರವೀಣ್ ಕುಲಕರ್ಣಿ, ವಿವಿಧ ವಿಭಾಗದ ಡೀನ್‌ಗಳಾದ ಡಾ.ಎಂ.ಎನ್.ಸುಮಾ, ವಿಶಾಲ್ ಕುಮಾರ್ ಗುಪ್ತ ಇತರರು ಇದ್ದರು.